ಜಿಲ್ಲೆ

ಯಡಿಯೂರಪ್ಪ ರೋಡ್ ಷೋಗೆ ಜನಸಾಗರ

Belagavi


ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಅಂಗವಾಗಿ ಬೈಲಹೊಂಗಲ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಬಿ.ಎಸ್.ಯಡಿಯೂರಪ್ಪ ರೋಡ್ ಷೋಗೆ ಜನಸಾಗರವೇ ಹರಿದು ಬಂದಿತ್ತು.  ಎಲ್ಲೆಡೆ ಯಡಿಯೂರಪ್ಪ ಜೈಕಾರ‌ ಮೊಳಗಿತು.
ಚೆನ್ನಮ್ಮ ವೃತ್ತದಿಂದ ಆರಂಭವಾದ ರೋಡ್ ಷೋ ರಾಯಣ್ಣ ವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ ವೃತ್ತಕ್ಕೆ ತಲುಪಿತು. ಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ತೆರಳಿ ಅಭೂತ್ವಪೂರ್ವ ಯಶಸ್ಸು ಕಂಡಿತು. ವಾದ್ಯಮೇಳಗಳು ಕಳೆ ತಂದವು. ಗೋ ಪೂಜೆಗೈದು, ವೀರಮಾತೆ ಚನ್ನಮ್ಮಾಜೀಗೆ ಗೌರವ ಸಮರ್ಪಿಸಲಾಯಿತು. ಪಟ್ಟಣವೆಲ್ಲ ಕೇಸರಿಮಯವಾಗಿತ್ತು. ಸ್ವಾಗತದ ಬ್ಯಾನರ ಅರ್ಭಟ ಜೋರಾಗಿತ್ತು. ಬಿಜೆಪಿ ಬಾವುಟ, ರೂಮಾಲು, ಟೊಪ್ಪಿಗೆ, ಪೇಟಾ ತೊಟ್ಟು ಮೆರವಣಿಗೆ ಮುಂದೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಬಡ್ಲಿ ಗ್ರಾಮದ ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತ ಆಕರ್ಷಣಿಯವಾಗಿತ್ತು.
ಇದೇ ಸಂದರ್ಭದಲ್ಲಿ ಬಿ.ಎಸ್.‌ಯಡಿಯೂರಪ್ಪ‌ ಮಾತನಾಡಿ, ದೇಶದೆಲ್ಲೆಡೆ ಕಾಂಗ್ರೇಸ್ ಪಕ್ಷ ಧೂಳಿಪಟವಾಗಿದೆ ಬರುವ ಚುನಾವಣೆಯಲ್ಲಿ ಬೈಲಹೊಂಗಲ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಮಲ ಅರಳಿಸಿ ಕಾಂಗ್ರೇಸ್ ಮುಕ್ತ ಭಾರತ ಮಾಡಬೇಕು ಎಂದರು.
    ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗ್ತಾ ಇದೆ. ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯ ಠೇವಣಿ ಕಳೆಯಬೇಕು ಎಂದು ಹೇಳಿದರು...
ಕೇಂದ್ರ ಸಚಿವ ಪ್ರಹ್ಲಾದ  ಜೋಶಿ ಮಾತನಾಡಿ, ಕಾಂಗ್ರೇಸ್ ಸುಳ್ಳು ಆಶ್ವಾಸನೆ ಪಕ್ಷ, ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಕಿಸಾನ ಸನ್ಮಾನ ಮೂಲಕ ಕೃಷಿಕರ ಖಾತೆಗೆ ಮೋದಿಜಿ ಮಾತಿನಂತೆ ಹಣ ನೀಡುತ್ತಿದ್ದಾರೆ. ವಿಜಯ ಸಂಕಲ್ಪಯಾತ್ರೆಯಲ್ಲಿ ಕಾಂಗ್ರೇಸನ ಪ್ರಜಾಧ್ವನಿ ಸುಳ್ಳು ಧ್ವನಿಯಾಗಿ ಅಡಗಿ ಹೋಗಿದೆ ಎಂದರು.
ಸಚಿವ ಭೈರತಿ ಬಸವರಾಜ, ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಸಚಿವರಾದ ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಅರುಣ ಶಹಾಪುರ, ಮಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಾಸಕ ಮಹಾಂತೇಶ ದೊಡಗೌಡ್ರ ರಥಯಾತ್ರೆಯಲ್ಲಿದ್ದರು.