ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯ ಗೆಲುವಿನ ಹುರುಪಿನಲ್ಲಿ ಬಿಜೆಪಿ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ಕೊಡಿಯಾಲಬೈಲ್‌ನ ಪಕ್ಷದ ಕಚೇರಿ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಜೈಕಾರ ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಳಿಕ ವಿಧಾನ ಪರಿಷತ್ ನೂತನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮೆರವಣಿಗೆಯಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆಯ್ಕೆ ಪತ್ರ ಸ್ವೀಕರಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಅವಿಭಜಿತ ದ.ಕ. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಿಕಾಸ್ ಪಿ., ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಇದ್ದರು.