ಜಿಲ್ಲೆ

ಏ.10ರಂದು ಉಡುಪಿಯಲ್ಲಿ 'ಜನಾಕ್ರೋಶ' ಯಾತ್ರೆ...

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ ಮಾಹಿತಿ

ಏ.6ರಂದು ಮನೆಗಳಲ್ಲಿ ಪಕ್ಷದ ಧ್ವಜಾರೋಹಣ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಏ.6ರಂದು ಜಿಲ್ಲೆಯ ಎಲ್ಲ 1,112 ಬೂತ್​ಗಳಲ್ಲಿ ಮತ್ತು ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣ ನಡೆಯಲಿದೆ. ಪಕ್ಷದ ಸೂಚನೆಯಂತೆ ಏ.10ರಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ ಕುಂದಾಪುರ ತಿಳಿಸಿದರು.

ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆ ಮತ್ತು ಮಂಡಲ ಮಟ್ಟದಲ್ಲಿ ಪಕ್ಷದ ಧ್ವಜಾರೋಹಣ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮನ

ಏ10ರಂದು ಬೆಳಗ್ಗೆ 9:30ಕ್ಕೆ ಜನಾಕ್ರೋಶ ಯಾತ್ರೆ ನಡೆಯಲಿದೆ. ಅದರ ಭಾಗವಾಗಿ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಯಾರ್ಡ್​ನಿಂದ ಬೃಹತ್​ ಜಾಥಾ ಪ್ರಾರಂಭಗೊಂಡು ಕಲ್ಸಂಕ ಮಾರ್ಗವಾಗಿ ಸಾಗಿ ಕಡಿಯಾಳಿಯಲ್ಲಿ ಸಮಾಪ್ತವಾಗಲಿದೆ. ಬೆಳಗ್ಗೆ 10:30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್​ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನಾಕ್ರೋಶ ಯಾತ್ರೆ ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ ಶೆಟ್ಟಿ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಉಪಾಧ್ಯಕ್ಷರಾದ ಕಿರಣಕುಮಾರ ಬೈಲೂರು, ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಸುರೇಶ ಶೆಟ್ಟಿ ಕಾಡೂರು, ಮಹಾವೀರ ಹೆಗ್ಡೆ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ ಕಾವೇರಿ, ಜಿಲ್ಲಾ ಕೋಶಾಧಿಕಾರಿ ಮನೋಹರ ಎಸ್​. ಕಲ್ಮಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್​, ಶ್ರೀಕಾಂತ ನಾಯಕ, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ, ಸದಾನಂದ ಬಳ್ಕೂರು, ಉದಯ ಎಸ್​. ಕೋಟ್ಯಾನ್​, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಸತ್ಯಾನಂದ ನಾಯಕ, ಶಿವಕುಮಾರ ಅಂಬಲಪಾಡಿ, ಮಾಧ್ಯಮ ಪ್ರಮುಖ ಶ್ರೀನಿಧಿ ಹೆಗ್ಡೆ, ಗಿರೀಶ ಎಂ. ಅಂಚನ್​, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲ್ಲೇಶ್​ ಶೆಟ್ಟಿ ಉಪಸ್ಥಿತರಿದ್ದರು.