ಜಿಲ್ಲೆ

ಬಸನಗೌಡ ಯತ್ನಾಳ್ ಪ್ರಶ್ನೆಗಳಿಗೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ: ಎಂ.ಬಿ.ಪಾಟೀಲ

ಮೈಸೂರು: ಜೆಡಿಎಸ್ ಪಕ್ಷ ಜಾತ್ಯತೀತ ತತ್ವಕ್ಕೆ ಎಳ್ಳುನೀರು ಬಿಟ್ಟು, ಅದನ್ನೆಲ್ಲ ಬಿಜೆಪಿಗೆ ಒಪ್ಪಿಸಿದೆ. ಈಗ ಸ್ವಾರ್ಥಕ್ಕಾಗಿ ಅದು ಭ್ರಷ್ಟ ಬಿಜೆಪಿ ಜತೆ ಸೇರಿಕೊಂಡು ಅಸ್ತಿತ್ವಕ್ಕೆ ಹೋರಾಡುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.


ಶುಕ್ರವಾರ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರು, ಅವರ ಕುಟುಂಬದವರು ಹಾಗೂ ನೆಂಟರಿಷ್ಟರೆಲ್ಲ ಹಾಸನದಲ್ಲಿ ನೂರಾರು ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲದ ಎಚ್.ಡಿ. ಕುಮಾರಸ್ವಾಮಿ ಈಗ ಬಿಜೆಪಿ ಜತೆ ಸೇರಿಕೊಂಡು ಪಾದಯಾತ್ರೆ ನಾಟಕವಾಡುತ್ತಿದ್ದಾರೆ ಎಂದು ಕುಟುಕಿದರು.


ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವತಃ ತಮ್ಮ ಪಕ್ಷದವರ ಮೇಲೆಯೇ ಬಹಿರಂಗವಾಗಿ ಆರೋಪಿಸಿದ್ದಾರೆ. ಯಡಿಯೂರಪ್ಪ ಅವರು ಮಾರಿಷಸ್‌ನಲ್ಲಿ 10 ಸಾವಿರ ಕೋಟಿ ರೂ. ಇಟ್ಟು ಬಂದಿದ್ದಾರೆ ಅಂತ ಹೇಳಿದ್ದರು. ಕರೊನಾ ಅಕ್ರಮದಲ್ಲಿ 2 ಸಾವಿರ ಕೋಟಿ ರೂ. ಲೂಟಿ ನಡೆದಿದೆ ಎಂದೂ ದೂರಿದ್ದರು. ಈ ಕುರಿತು ಮೊದಲು ಉತ್ತರ ಕೊಡಿ ಎಂದು ಸವಾಲು ಹಾಕಿದರು.


ಬಿಜೆಪಿ-ಜೆಡಿಎಸ್ ಪಕ್ಷದವರು ಇಲ್ಲಿಗೆ ಬಂದಾಗ ಇವೆಲ್ಲ ಪ್ರಶ್ನೆಗಳನ್ನು ಜನರು ಕೇಳಬೇಕು. ಲೂಟಿ ಮಾಡಿದ ನೀವು, ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ಏಕೆ ಬಂದಿದ್ದೀರಿ ಎಂದು ಧ್ವನಿ ಎತ್ತಬೇಕು ಎಂದು ಜನರಿಗೆ ಹೇಳಿದರು.


ಹಿಂದುಳಿದ ವರ್ಗದಿಂದ ಬಂದಿರುವ ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಹುದ್ದೆ ಅಲಂಕರಿಸಿರುವುದು ಬಿಜೆಪಿ-ಜೆಡಿಎಸ್‌ಗೆ ಅಪಥ್ಯವಾಗಿದೆ. ಹೀಗಾಗಿ ಅವು ಆಧಾರರಹಿತ ಆರೋಪ ಮಾಡುತ್ತ ಕುರ್ಚಿಯಿಂದ ಕೆಳಕ್ಕಿಳಿಸಲು ಸಂಚು ರೂಪಿಸುತ್ತಿವೆ ಎಂದು ದೂರಿದರು.


ಸಿದ್ದರಾಮಯ್ಯ ಅವರು 40 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ಒಂದೇ ಒಂದು ಕಪ್ಪುಚುಕ್ಕೆಯೂ ಅವರ ಸಾರ್ವಜನಿಕ ಬದುಕಿನಲ್ಲಿ ಇಲ್ಲ. ಈಗ ಮುಡಾ ಹಗರಣದ ನೆಪದಲ್ಲಿ ಅವರನ್ನು ಪದಚ್ಯುತಗೊಳಿಸುವ ಪಿತೂರಿ ನಡೆಯುತ್ತಿದೆ ಎಂದು ದೂರಿದರು.


ಮುಡಾ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು, ಕಾನೂನಿನ ಪ್ರಕಾರವೇ ಅವರ ಪತ್ನಿಗೆ ಬದಲಿ ನಿವೇಶನಗಳನ್ನು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನಿದೆ. ಬದಲಿ ನಿವೇಶನಗಳ ಹಂಚಿಕೆ ಬಿಜೆಪಿ ಸರ್ಕಾರದಿಂದ ಆಗಿದೆ. ಆಗ ಅಧಿಕಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೇ ಇದ್ದರು. ಆದರೆ. ವಿನಾಕಾರಣ ಸಿಎಂ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.