ಜಿಲ್ಲೆ

ಪಕ್ಷ ನಡೆಸಿಕೊಂಡ ರೀತಿಗೆ ಬೇಸರ: ರಘುಪತಿ ಭಟ್

ಉಡುಪಿ: ಪಕ್ಷ ನನ್ನನ್ನು ನಡೆಸಿಕೊಂಡ ಬಗ್ಗೆ ತುಂಬಾ ಬೇಸರವಿದೆ. ಕನಿಷ್ಠ ಜಿಲ್ಲಾ ಮಟ್ಟದ ನಾಯಕರು ಕೂಡ ಕರೆ ಮಾಡಿ ಮಾತನಾಡಿಲ್ಲ. ಜಾತಿಯ ಕಾರಣಕ್ಕೆ ಟಿಕೆಟ್ ತಪ್ಪಿದೆ ಅನ್ನೋದು ಖಚಿತ. ಈ ಬಾರಿ ನಿನಗೆ ಟಿಕೆಟ್ ಇಲ್ಲ ಎಂದು ಮೊದಲೇ ಹೇಳಿದ್ದರೆ ಮಾನಸಿಕವಾಗಿ ಸಿದ್ಧನಾಗುತ್ತಿದ್ದೆ. ಏನು ಹೇಳದೆ ಕೊನೆಗಳಿಗೆಯಲ್ಲಿ ಅವಕಾಶ ವಂಚನೆ ಮಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಕ್‌ನಲ್ಲಿದ್ದೇನೆ ಏನು ಹೇಳುವ ಸ್ಥಿತಿಯಲಿಲ್ಲ. ಟಿವಿ ನೋಡಿ ನನಗೆ ಟಿಕೆಟ್ ಇಲ್ಲ ಅಂತ ಗೊತ್ತಾಗಿದೆ. ಪಕ್ಷದ ನಾಯಕರು ನನ್ನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ನಾನು ಯಾವುದೇ ನಿರ್ಧಾರವನ್ನು ಪ್ರಕಟಿಸುವ ಸ್ಥಿತಿಯಲ್ಲಿ ಇಲ್ಲ. ಪಕ್ಷ ನನಗೆ ಅನೇಕ ಅವಕಾಶಗಳನ್ನು ಕೊಟ್ಟಿದೆ. ಸ್ಪರ್ಧಿಸಿದ 3 ಬಾರಿಯೂ ಗೆಲುವು ಸಾಧಿಸಿದ್ದೇನೆ. ಬ್ರಾಹ್ಮಣ ಎಂಬ ಕಾರಣಕ್ಕೆ ನನಗೆ ಟಿಕೆಟ್ ಕೈತಪ್ಪಿದೆ. ಪಕ್ಷಕ್ಕೆ ನನ್ನ ಅಗತ್ಯವಿಲ್ಲ ಎಂದು ತೋರುತ್ತದೆ. ಕಷ್ಟಕಾಲದಲ್ಲಿ ಎದೆಯೊಡ್ಡಿ ಪಕ್ಷವನ್ನು ಬೆಳೆಸಿದ್ದೇವೆ. ಕಾರ್ಯಕರ್ತರ ಪರವಾಗಿ ನಾನು ಸದಾ ಕಾಲ ಇರುತ್ತೇನೆ. ಇನ್ನು ಮುಂದೆಯೂ ಕಾರ್ಯಕರ್ತರ ಕಷ್ಟಕ್ಕೆ ನಾನಿದ್ದೇನೆ. ಟಿಕೆಟ್ ಪಡೆದ ಯಶ್ ಪಾಲ್ ಸುವರ್ಣ ನಾನು ಬೆಳೆಸಿದ ಹುಡುಗ. ಈ ಬಗ್ಗೆ ಸಂತೋಷವಿದೆ. ಆದರೆ ಪಕ್ಷದ ಪ್ರಚಾರಕ್ಕೆ ನನ್ನ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ನನಗೆ ಈ ಶಾಕ್‌ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮೂರು ಬಾರಿ ಶಾಸಕನಾದವನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.