ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿವೆ. ಕೊಪ್ಪಳದ ಎಸ್ಸಿ ಮೀಸಲು ಕ್ಷೇತ್ರ ಕನಕಗಿರಿ ಟಿಕೆಟ್ ಕೊಡಿಸುವುದಾಗಿ ಆಕಾಂಕ್ಷಿ ಗಾಯತ್ರಿ ಪತಿಗೆ 21 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿ ಮೂಲದ ವಿಶಾಲ್ ನಾಗ್, ಬೆಂಗಳೂರಿನ ಜೀತು ಮತ್ತು ಗೌರವ್ ಎಂಬುವರ ವಿರುದ್ಧ ಗಾಯತ್ರಿ ಪತಿ ತಿಮ್ಮಾರೆಡ್ಡಿ ಜು.19ರಂದು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕನಕಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಗಾಯತ್ರಿ ತಿಮ್ಮಾರೆಡ್ಡಿ ಮುಂಚೂಣೆಯಲ್ಲಿದ್ದರು. ಇದೇ ಸಮಯದಲ್ಲಿ ತಿಮ್ಮಾರೆಡ್ಡಿಗೆ ಜೀತು ಎಂಬಾತನ ಮೂಲಕ ದೆಹಲಿಯಲ್ಲಿ ವಿಶಾಲ್ ನಾಗ್ ಪರಿಚಯವಾಗಿದೆ. ಆತ ತಾನು ಬಿಜೆಪಿ ಸೆಂಟ್ರಲ್ ಸರ್ವೇ ಟೀಂನ ಮುಖ್ಯಸ್ಥನೆಂದು ಹೇಳಿಕೊಂಡಿದ್ದಾನೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಅರುಣ್ ಸಿಂಗ್ ಕಡೆಯಿಂದ ಸಮೀಕ್ಷೆ ಮಾಡುತ್ತಿದ್ದೇನೆ. ಸಮೀಕ್ಷೆಯಲ್ಲಿ ಗಾಯತ್ರಿ ಹೆಸರು ಎರಡನೇ ಸ್ಥಾನದಲ್ಲಿದೆ. ನಾವು ಮೊದಲ ಸ್ಥಾನಕ್ಕೆ ಬರುವಂತೆ ಮಾಡಿ ಟಿಕೆಟ್ ಕೊಡಿಸುವುದಾಗಿ ಯಾಮಾರಿಸಿದ್ದಾರೆ.
ಸಮೀಕ್ಷೆ ಮಾಡುವ ಹುಡುಗರಿಗಾಗಿ 25 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ 21 ಲಕ್ಷ ರೂ. ಡೀಲ್‌ಗೆ ತಿಮ್ಮಾರೆಡ್ಡಿ ಒಪ್ಪಿಕೊಂಡಿದ್ದು, ದೆಹಲಿ 19 ಲಕ್ಷ ರೂ. ನಗದು ನೀಡಿದ್ದಾರೆ. 2 ಲಕ್ಷ ರೂ. ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟವಾದಾಗ ಹೆಸರು ಬಾರದಾಗ ಮೋಸ ಹೋಗಿರುವುದು ತಿಳಿದಿದೆ. ಈ ಸಂಬಂಧ ವಿಶಾಲ್‌ನಾಗ್‌ಗೆ ಸಂಪರ್ಕಿಸಿದರೆ ಕರೆ ಸ್ವೀಕರಿಸಿಲ್ಲ. ನಂತರ ಹಣ ಮರಳಿಸುವುದಾಗಿ ತಿಳಿಸಿ ಮೊಸ ಎಸಗಿರುವುದಾಗಿ ದೂರು ದಾಖಲಿಸಲಾಗಿದೆ.