ಜಿಲ್ಲೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಂದೆ ಕಣ್ಣೀರು ಹಾಕಿದ ಬಿಜೆಪಿ ಕಾರ್ಯಕರ್ತೆ; ಗಳಗಳನೆ ಅತ್ತಿದ್ದೇಕೆ?

ಕಲಬುರಗಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಂದೆ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಣ್ಣೀರು ಹಾಕಿ ತಮ್ಮ ಸಂಕಟವನ್ನು ತೋಡಿಕೊಂಡ ಪ್ರಸಂಗವೊಂದು ನಡೆದಿದೆ. ಕಲಬುರಗಿ ನಗರದ ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ಅವರು ಬಿಜೆಪಿ ಕಾರ್ಯಕರ್ತರ ಸಭೆ ಮುಗಿಸಿ ಹೋಗುವಾಗ ಈ ಘಟನೆ ನಡೆದಿದೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಮಾಜಿ ಸದಸ್ಯೆ ಸಾವಿತ್ರಿ ಕುಳಗೇರಿ ಎಂಬವರು ಹೀಗೆ ಕಣ್ಣೀರು ಹಾಕಿದ್ದು, ಸ್ಥಳದಲ್ಲಿದ್ದ ಸಚಿವೆ ಹಾಗೂ ಇತರ ಮುಖಂಡರಿಗೆ ಸ್ವಲ್ಪ ಮುಜುಗುರ ಉಂಟಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಇಪ್ಪತ್ತೈದು ವರ್ಷಗಳಿಂದ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಆಗಿ ಕೆಲಸ ಮಾಡಿದ್ದೇನೆ. ಆದರೆ ಬಿಜೆಪಿ ನನಗೆ ಸೂಕ್ತ ಸ್ಥಾನ ಕೊಟ್ಟಿಲ್ಲ ಎಂದು ಸಾವಿತ್ರಿ ತಮ್ಮ ದುಃಖ ಹೇಳಿಕೊಂಡಿದ್ದಾರೆ. ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ. 31ರಲ್ಲಿ ಬಿಜೆಪಿ ಟೆಕೆಟ್ ಆಕಾಂಕ್ಷಿಯಾಗಿದ್ದರೂ ನನಗೆ ಕೊಟ್ಟಿರಲಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸದೆ ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ರವಿಕುಮಾರ್ ಅವರು, ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನ ಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಸಾವಿತ್ರಿ, ಪಕ್ಷದಲ್ಲೇ ಇದ್ದು ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.