ಹಳಿಯಾಳ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ಎಲ್ಲೆ ಮಿರಿದೆ ಹಾಗೂ ಸರ್ಕಾರ ಆರ್ಥಿಕವಾಗಿ ದಿವಾಳಿ ತೆಗೆದಿದೆ ಎಂದು ರಾಜ್ಯ ಬಿಜೆಪಿ ಪಕ್ಷ ಕಾರ್ಯಾಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನಿಲ್ ಹೆಗಡೆ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಶುಕ್ರವಾರ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮ ಪಂಚಾಯತ ಮುತ್ತಿಗೆ ಹಾಕಿ ಜನಾಕ್ರೋಶ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳೇ ಈಗ ನಡೆದಿವೆ ಮತ್ತು ಪ್ರಸ್ತುತ ಯಾವ ಕಾಮಗಾರಿಗೂ ಕಾರ್ಯಾದೇಶ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಗ್ರಾ.ಪಂ ವ್ಯವಸ್ಥೆಗೆ ಅತೀ ಮಹತ್ವದ ಸ್ಥಾನವಿದೆ. ಆದರೆ ರಾಜ್ಯ ಸರ್ಕಾರ ಈ ಪಂಚಾಯತ ವ್ಯವಸ್ಥೆ ನಿರ್ಲಕ್ಷಿಸಿದೆ. ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಇದರಿಂದ ಗ್ರಾಮೀಣ ಭಾಗದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ, ಈ ಸರ್ಕಾರವು ಆಶ್ರಯ ಮನೆಗಳನ್ನು ಮಂಜೂರು ಮಾಡಿಲ್ಲ. ಆಶ್ರಯ ಮನೆಗಳ ಹಿಂದಿನ ಬಿಲ್ ಬಾಕಿ ಬಿಡುಗಡೆ ಮಾಡಲಿಲ್ಲ. ಜಿ.ಪಿಎಸ್ ಮಾಡಲಿಲ್ಲ, ಕೇವಲ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನಗಳ ಮೇಲೆ ಇಂದು ಗ್ರಾಪಂ ಆಡಳಿತ ನಡೆದಿದೆ ಎಂದರು.
ತಾಲೂಕಿನಲ್ಲಿ ಅಭಿವೃದ್ಧಿ ಪಂಚಾಯತ ಅಧಿಕಾರಿಗಳಿಗೆ ಎರಡೆರಡು ಗ್ರಾಪಂಗಳ ಜವಾಬ್ದಾರಿ ಯನ್ನು ನೀಡಿರುವುದರಿಂದ ಯಾವ ಪಿಡಿಒಗಳು ಗ್ರಾಮಸ್ಥರಿಗೆ ಸಿಗುತ್ತಿಲ್ಲ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಸಮಸ್ಯೆಗಳಿಗೆ ಜನರಿಂದ ಆಯ್ಕೆಯಾದ ಗ್ರಾಪಂ ಸದಸ್ಯರಿಗೆ ಈ ಪಿಡಿಒಗಳು ಗೌರವ ನೀಡುತ್ತಿಲ್ಲ, ಈ ಸ್ವತ್ತು ಯೋಜನೆಯಲ್ಲಿ ಪಿಡಿಒಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹೆಗಡೆ ಆರೋಪಿಸಿದರು.
ಬಿಜೆಪಿ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಟ ಅಲ್ಲಾ ಬಂಡ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರಿಗೆ ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದರು.
20 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಭಟನೆ: ತಾಲೂಕಿನ 20 ಗ್ರಾಮ ಪಂಚಾಯತಗಳ ಮುಂದೆ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ವಿಠ್ಠಲ ಸಿದ್ದನ್ನವರ, ಸಂತೋಷ್ ಘಟಕಾಂಬಳೆ, ಶ್ರೀನಿವಾಸ ಘೋಟ್ನೇಕರ, ಶಂಕರ ಕಾಜಗಾರ, ಹರಿ ಬೊಬ್ಲಿ, ತಾನಾಜಿ ಪಟ್ಟೇಕರ, ಜ್ಞಾನೇಶ ಮಾನಗೆ ಮೊದಲಾದವರು ಇದ್ದರು.