ಮಂಗಳೂರು : ಕರಾವಳಿ ಭಾಗದಲ್ಲಿ ಮರಳು ಪೂರೈಕೆ ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಬಗ್ಗೆ ಮುಖ್ಯಮಂತ್ರಿ, ಗಣಿ ಸಚಿವರು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನ ಆಗಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡ ಕಾರಣ ಜಿಲ್ಲೆಯ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಈ ಸಮಸ್ಯೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದರು.
ಮರಳು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿದೆ. ಮರಳು ಸಿಗದೇ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳು ಲಭ್ಯವಿದ್ದರೂ, ಪೂರೈಕೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಮರಳು ದಂಧೆಯಲ್ಲಿ ಶಾಮೀಲಾಗಿದ್ದು, ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಮೂರು ಪಟ್ಟು ಹೆಚ್ಚಿನ ಬೆಲೆಗೆ ರಾತ್ರಿ ವೇಳೆ ಮರಳು ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಅವಧಿಯಲ್ಲಿ ಜಿಲ್ಲೆಯ ಶಾಸಕರಿಗೆ ಸಾವಿರಾರು ಕೋಟಿ ರೂ. ಅನುದಾನ ದೊರೆತು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಪ್ರಸ್ತುತ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾರ್ಪೋರೇಟರ್‌ಗೆ ಸಿಗುವಷ್ಟು ಅನುದಾನವೂ ಶಾಸಕರಿಗೆ ಸಿಗುತ್ತಿಲ್ಲ. ಬಿಜೆಪಿ ಸರಕಾರ ಆರಂಭಿಸಿದ್ದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಭಿವೃದ್ಧಿಗೆ ಬಿಡಿಗಾಸೂ ಬಿಡುಗಡೆ ಆಗಿಲ್ಲ ಎಂದು ಅವರು ದೂರಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಕಾರ್ಯದರ್ಶಿ ಭರತ್‌ಕುಮಾರ್ ಉಪಸ್ಥಿತರಿದ್ದರು.