ಜಿಲ್ಲೆ

ಕಾಲ್ತುಳಿತ ದುರಂತಕ್ಕೆ ಕಾಂಗ್ರೆಸ್ ಹೊಣೆ: ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ದುರಂತ ರಾಜ್ಯದಲ್ಲಿ ಕಾಂಗ್ರೆಸ್‌ನ ಆಡಳಿತ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಕಿಡಿಕಾರಿದರು.

ದುರಂತದ ನೈತಿಕ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು. ಅಧಿಕಾರ ಸಹಿತ ನ್ಯಾಯಾಂಗ ಸಮಿತಿ ರಚಿಸಿ ದುರಂತದ ತನಿಖೆ ನಡೆಸಬೇಕು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹಿರಿತನಕ್ಕೆ ತಕ್ಕ ಗೌರವವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಪಕ್ಷದಲ್ಲಿ ಜಿಲ್ಲೆಗೊಬ್ಬರಂತೆ ಗೃಹ ಮಂತ್ರಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಗೃಹಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಆಯಾ ಜಿಲ್ಲೆಗಳಲ್ಲಿ ನಡೆಯುವ ದುರಂತಗಳನ್ನು ಆಯಾ ಜಿಲ್ಲಾ ಉಸ್ತುವಾರಿ ಮಂತ್ರಿಗಳನೇ ನಿಯಂತ್ರಿಸಲು ಮುಂದಾಗಿದ್ದು, ರಾಜ್ಯದಲ್ಲಿ ಗೃಹ ಮಂತ್ರಿಗಳು ಇದ್ದಾರೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ಜಲಜೀವನ್ ಮಿಷನ್ ಯೋಜನೆಯಡಿ 799 ಕೋಟಿ ರೂ, 869 ಕೋಟಿ ರೂ ಎರಡು ಹಂತದಲ್ಲಿ ಜಿಲ್ಲೆಗೆ ಅಭಿವೃದ್ಧಿ ಕಾರ್ಯ ನಡೆದಿದೆ. ಜಿಲ್ಲೆಯ ಶಾಸಕರು ಹಾಗೂ ಕೃಷಿ ಮಂತ್ರಿ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಗ್ಯಾರೆಂಟಿ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಹೊರೆ ಹೊತ್ತ ಸರ್ಕಾರ ಅಭಿವೃದ್ಧಿ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ರೈತ ಕಾರ್ಯದರ್ಶಿ ಅಶೋಕ್, ನಗರ ಘಟಕ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ ಇದ್ದರು.