ಮಂಡ್ಯ: ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಮಾಡಲು ಘೋಷಿಸಿರುವುದು ಐತಿಹಾಸಿಕ ನಿರ್ಧಾರ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಮಹೇಶ್ ಹೇಳಿದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಬೇಕು. ಆದರೆ ಕಾಂಗ್ರೆಸ್ ಸರ್ಕಾರ 1951ರಿಂದ 2011ರವರೆಗೆ ಜಾತಿ ಗಣತಿ ಮಾಡಿರಲಿಲ್ಲ. 2006ರಲ್ಲಿ ಸುಷ್ಮಾ ಸ್ವರಾಜ್ ಅವರು ಪತ್ರದ ಮೂಲಕ ಜಾತಿಗಣತಿಗೆ ಬೆಂಬಲ ವ್ಯಕ್ತಪಡಿಸಿದ್ದರೂ ಕಾಂಗ್ರೆಸ್ ಸರ್ಕಾರ ಗಣತಿ ಮಾಡಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
1920ರಲ್ಲಿ ಮೈಸೂರು ಮಹಾರಾಜರು ಜಾತಿಗಣತಿಯನ್ನು ನಡೆಸಿದ್ದು ಬಿಟ್ಟರೆ ಇದುವರೆಗೂ ನಡೆದಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾತಿ ಗಣತಿ ನಡೆಸಿ ಸಾಮಾಜಿಕ ಅವಶ್ಯಕತೆಯ ನೈಜ ದತ್ತಾಂಶಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದನ್ನು ಕಾಂಗ್ರೆಸ್ ಸರ್ಕಾರ ಸಹಿಸುತ್ತಿಲ್ಲ. ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಾಡಿದ ಒತ್ತಡದಿಂದಲೇ ಜಾತಿಗಣತಿ ನಡೆಯುತ್ತಿದೆ ಎಂಬು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಿದ್ದು, ರಾಜ್ಯ ಸರ್ಕಾರದಿಂದ ಹತ್ಯೆಗೈದವರ ರಕ್ಷಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಮತಬ್ಯಾಂಕ್ ಚಾಳಿಯನ್ನು ಮುಂದುವರೆಸಿದೆ. ರಾಜ್ಯದಲ್ಲಿ ಗೃಹ ಇಲಾಖೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ತರಲು ಅಸಾಧ್ಯವಾದಲ್ಲಿ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವಿವೇಕ್, ನಗರ ಘಟಕದ ಅಧ್ಯಕ್ಷ ವಸಂತ್, ನಾಗಾನಂದ, ನರಸಿಂಹಾಚಾರ್ ಇದ್ದರು.