ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸಿಎಂ ಬದಲಾವಣೆ ಬಗ್ಗೆ ಇವತ್ತಿನವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಕೇವಲ ಮಾಧ್ಯಮಗಳಿಂದ ಮಾತ್ರ ಈ ವಿಚಾರ ತಿಳಿದುಕೊಂಡಿದ್ದೇನೆ. ರಾಜ್ಯದ ಟ್ರ್ಯಾಕ್ಟರ್ ಯಡಿಯೂರಪ್ಪ ಬಿಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪರ್ಕಳದಲ್ಲಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲಾ ಸಚಿವರು ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಎಲ್ಲರೂ ಆಯಾಯ ಜಿಲ್ಲೆಯಲ್ಲಿದ್ದು ನೆರೆ ಪರಿಹಾರದ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಂತ್ವನ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ದಲಿತ ನಾಯಕರು ಮೂಲೆ ಗುಂಪು
ಸಿದ್ದರಾಮಯ್ಯ ಹಿಂದೆ ಅಹಿಂದಾ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು. ಮುಖ್ಯಮಂತ್ರಿಯಾದ ಬಳಿಕ ಅಹಿಂದ ಮರೆತು ಹಿಂದುಳಿದ ವರ್ಗಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ದಲಿತ ಮುಖ್ಯಮಂತ್ರಿ ಚರ್ಚೆ ಮುಚ್ಚಿಹಾಕಿದ್ದಾರೆ. ಕಾಂಗ್ರೆಸ್ನಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಪರಮೇಶ್ವರ್ ಮತ್ತು ಖರ್ಗೆಯವರನ್ನು ಸೋಲಿಸಿದ ಇತಿಹಾಸ ಸಿದ್ದರಾಮಯ್ಯ ಅವರಿಗಿದೆ. ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ನೀಡಿದ್ದಾರೆ. ಯಡಿಯೂರಪ್ಪ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಸಚಿವಸಂಪುಟದಲ್ಲಿ ಶೇ. 30ರಷ್ಟು ಎಸ್‌ಸಿ ಮತ್ತು ಎಸ್‌ಟಿ ಮಂತ್ರಿಗಳಿದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.