ಜಿಲ್ಲೆ

ಬಿಜೆಪಿ ಪ್ರಚಾರಕರ ಲಿಸ್ಟ್‌ನಲ್ಲಿಲ್ಲ ಮಂಡ್ಯ ಸಂಸದೆ, ಸಚಿವ ಕೆಸಿಎನ್

reportermys

ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಸಂಸದೆ ಸುಮಲತಾಗೆ ಅವಕಾಶ ನೀಡಿಲ್ಲ. ಅತ್ತ ಜಿಲ್ಲೆಯ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಪರಿಗಣಿಸಿಲ್ಲ.

ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ಪಕ್ಷೇತರ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಹುಪರಾಕ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಸಂಬಂಧ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸುಮಲತಾ ಹೆಸರು ಪರಿಗಣಿಸಬಹುದೆಂದು ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಅದ್ಯಾಕೋ ಬಿಜೆಪಿ ಹೈಕಮಾಂಡ್ ಮಾತ್ರ ಪಟ್ಟಿಯಿಂದ ಸಂಸದೆ ಹೆಸರನ್ನು ದೂರವಿಟ್ಟಿದೆ. ಇದರೊಂದಿಗೆ ಜಿಲ್ಲೆಗೆ ಅವರನ್ನು ಸೀಮಿತಗೊಳಿಸಲಾಗಿದೆ. ಈ ನಡುವೆ ತಾರಾ ಅನುರಾಧಾ, ಶ್ರುತಿ, ಜಗ್ಗೇಶ್ ಅವರಿಗೆ ಪಟ್ಟಿಯಲ್ಲಿ ಅವಕಾಶ ನೀಡಿರುವುದು ಗಮನಾರ್ಹ.

ಅತ್ತ ಜಿಲ್ಲೆಯ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೂ ತಾರಾ ಪ್ರಚಾರಕರ ಪಟ್ಟಿಗೆ ಪರಿಗಣಿಸಿಲ್ಲ. ಆದರೆ ಹಲವು ಹಾಲಿ ಸಚಿವರಿಗೆ ಮಣೆ ಹಾಕಲಾಗಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆಸಿಎನ್ ತ್ರಿಕೋನ ಸ್ಪರ್ಧೆ ಎದುರಿಸಬೇಕಿದೆ. ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಟಕ್ಕರ್ ನೀಡಲು ಸಜ್ಜಾಗಿವೆ.

ಮಂಡ್ಯದಲ್ಲಿ ರಮ್ಯಾ ಪ್ರಚಾರ: ಚುನಾವಣೆಯ ಕಾಂಗ್ರೆಸ್ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮಂಡ್ಯ ಜಿಲ್ಲೆಯ ಮಾಜಿ ಸಂಸದೆ ರಮ್ಯಾ ಅವರು ಸ್ಥಾನ ಪಡೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ನೇರ ವಾಗ್ದಾಳಿ ನಡೆಸುವ ರಮ್ಯಾ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.