ಮಂಡ್ಯ: ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ಪಿತೂರಿ ಮಾಡಿರುವುದು ಜಗಜ್ಜಾಹೀರಾಗಿದೆ. ಆದರೆ ರಾಜ್ಯ ಸರ್ಕಾರ ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯುವ ಉದ್ದೇಶದಿಂದ ಪಿತೂರಿದಾರರ ಜೊತೆ ಸೇರಿ ಎಸ್‌ಐಟಿ ರಚನೆ ಮಾಡುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.
ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಬುರುಡೆ ಗ್ಯಾಂಗ್ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಹೊಸಕಥೆ ಹೇಳಿ ಭಕ್ತರನ್ನು ಮರಳು ಮಾಡುತ್ತಿದ್ದರೂ ಸರ್ಕಾರ ಮೌನವಾಗಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದರ ಬಗ್ಗೆ ತಿಳಿಯಲು ತನಿಖೆ ನಡೆಸಬೇಕೇ ಹೊರತು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುವವರ ಹಿಂದೆ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟೀ ಬಿಸಿದ್ದು, ಎಸ್‌ಐಟಿ ರಚನೆ ಮಾಡಲು ಯಾರು ಅಧಿಕಾರ ಕೊಟ್ಟವರು, ಇದು ಎಸ್‌ಐಟಿ ಅಲ್ಲ, ಇದೊಂದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟೆರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್, ಪಬ್ಲಿಸಿಟಿ ಇಂಟೆರೆಸ್ಟ್ ಲಿಟಿಗೇಷನ್ ಎಂದು ತೀವ್ರ ವಾಗ್ದಾಳಿ ನಡೆಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಬುರುಡೆ ಚನ್ನಯ್ಯ ಪುಂಖಾನುಪುಂಕವಾಗಿ ಹೇಳಿಕೆ ನೀಡಿದ್ದನ್ನೇ ನಂಬಿದ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಭೂಮಿಯನ್ನು ಅಗೆದರೂ ಯಾವುದೇ ಶವ ಸಿಗದ ಕಾರಣ ಆತನನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ದೂರಿದ್ದಾರೆ.
ಆರೋಪಿ ಚಿನ್ನಯ್ಯ ಹೇಳಿದಂತೆ ರಾಜ್ಯ ಸರ್ಕಾರ ಮತ್ತು ಎಸ್‌ಐಟಿ ತಂಡ ಧರ್ಮಸ್ಥಳದ ಸುತ್ತಮುತ್ತ ಹತ್ತಿಪ್ಪತ್ತು ಅಡಿಗಳಷ್ಟು ಭೂಮಿಯನ್ನು ಅಗೆದು ಪರಿಶೀಲನೆ ನಡೆಸುವ ಮೂಲಕ ತೆರಿಗೆದಾರರ ಹಣವನ್ನು ಲೂಟಿ ಮಾಡಿದ್ದಾರೆ. ಮಾತ್ರವಲ್ಲದೆ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೂ ಮುನ್ನ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ ಮೇ.5ರಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ಚಂದ್ರ ನೇತೃತ್ವದ ಪೀಠ ಅರ್ಜಿ ವಜಾಗೊಳಿಸಿತ್ತು. ಆದರೂ ಸರ್ಕಾರ ಎಸ್‌ಐಟಿ ರಚಿಸಿ ಇಲ್ಲದ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಅರಸರ ಆಸ್ತಿಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಯತ್ನಿಸಿ ವಿಲರಾಗಿದ್ದರು. ಅದೇ ಮಾದರಿಯಲ್ಲಿ ಧರ್ಮಸ್ಥಳ ಶ್ರೀಕ್ಷೇತ್ರವನ್ನೂ ಸರ್ಕಾರದ ವಶಕ್ಕೆ ಪಡೆಯಲು ಪಿತೂರಿದಾರರ ಜೊತೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.