ಮಂಡ್ಯ: ತಮಿಳುನಾಡಿನಲ್ಲಿ ನೈಋತ್ಯ ಮತ್ತು ಈಶಾನ್ಯ ಮನ್ಸೂನ್ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡಲು ಸಾಧ್ಯವಿಲ್ಲ. ಈ ವಾಸ್ತವಾಂಶದ ಮೇಲೆ ನಾವು ಗಟ್ಟಿನಿಲುವು ತೆಗೆದುಕೊಳ್ಳುವ ಬದಲು ರಾಜ್ಯಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.
ಕೆಆರ್‌ಎಸ್ ಡ್ಯಾಂನಿಂದ ತ.ನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರಿನ ವಿಚಾರದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ ಸಹ ಕಾವೇರಿ ನೀರನ್ನು ತ.ನಾಡಿಗೆ ಬಿಡುತ್ತಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ಲೆಕ್ಕಿಸದೆ ತಮಿಳುನಾಡು ಸರ್ಕಾರ ಸಿಡಬ್ಲುೃಸಿ ಆದೇಶ ಉಲ್ಲಂಘನೆ ಮಾಡಿ ನಾಲ್ಕು ಪಟ್ಟು ಕುರುವೈ ಪ್ರದೇಶ ಬೆಳೆಗೆ ನೀರನ್ನು ಒದಗಿಸಿದೆ. ತ.ನಾಡು ತನ್ನ ನೀರಾವರಿ ಭೂಮಿಯನ್ನು ವಿಸ್ತಾರ ಮಾಡಿಕೊಳ್ಳುತ್ತಿರುವ ಬಗ್ಗೆ ಗಮನ ಸೆಳೆವ ಕೆಲಸ ಮಾಡಿ, ಸತ್ಯ ಶೋಧನಾ ಸಮಿತಿಯನ್ನು ರಾಜ್ಯಕ್ಕೆ ಕಳಿಸಿ ಪರಿಶೀಲಿಸಿ ಎಂಬ ಮಾತನಾಡಿದರೂ ರಾಜ್ಯ ಸರ್ಕಾರ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು, ಪ್ರತಿನಿಧಿಗಳು ಪ್ರತಿಭಟಿಸದೆ ಸುಮ್ಮನೆ ಇದ್ದಾರೆ. ಇದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ. ಈಗಿರುವ ನಮ್ಮ ನಾಲ್ಕು ಜಲಾಶಯಗಳ ನೀರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಖಾರಿಫ್ ಬೆಳೆಗಳಿಗೆ ನೀರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಬಿಡುವುದು ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂದು ದೂರಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿ ಕಾಪಾಡಬೇಕಾದುದ್ದು ರಾಜ್ಯ ಸರ್ಕಾರದ ಕೆಲಸ, ರೈತರ ಬೆಳೆಗಳಿಗೆ ನೀರು ನೀಡದೆ, ಕೆರೆಕಟ್ಟೆಗಳನ್ನು ತುಂಬಿಸದೆ, ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ರವರು ತಮಿಳು ನಾಡಿಗೆ 10 ಟಿಎಂಸಿ ನೀರು ಬಿಡಲು ಸಿದ್ದ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದಿದ್ದಾರೆ.