ವಿಜಯಪುರದ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು. ಸಂಸದ ರಮೇಶ ಜಿಗಜಿಣಗಿ, ಅರುಣ ಶಹಾಪುರ, ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.  
ಜಿಲ್ಲೆ

ವಕ್ಫ್ ಕಾಯ್ದೆ ವಿರೋಧಿಸಿ ಬಿಜೆಪಿ ಧರಣಿ, ಬೃಹತ್ ಪ್ರತಿಭಟನಾ ಮೆರವಣಿಗೆ

Vijyapura - Parsuram Bhasagi

ವಿಜಯಪುರ: ವಕ್ಫ್ ಬೋರ್ಡ್ ರದ್ದುಗೊಳಿಸುವುದು ಹಾಗೂ 1974ರ ಗೆಜೆಟ್ ರದ್ದುಗೊಳಿಸಲು ಆಗ್ರಹಿಸಿ ಬಿಜೆಪಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತಲ್ಲದೇ ಒಂದು ದಿನದ ಧರಣಿ ನಡೆಸಲಾಯಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬಳಿಕ ಜಿಲ್ಲಾಡಳಿತ ಕಚೇರಿ ಎದುರು ಧರಣಿ ಆರಂಭಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರೈತರ ಭೂಮಿ, ಮಠ-ಮಾನ್ಯಗಳ ಆಸ್ತಿ ಹಾಗೂ ಜನ ಸಾಮಾನ್ಯರ ಜಮೀನುಗಳನ್ನು ಕಬಳಿಸುತ್ತಿರುವ ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮ ನಿಲ್ಲುವವರೆಗೂ ಹೋರಾಟ ನಿತ್ಯ-ನಿರಂತರ ಎಂದರಲ್ಲದೇ ಕೂಡಲೇ ವಕ್ಫ್ ಕಾಯ್ದೆ ರದ್ಧುಗೊಳಿಸದಿದ್ದರೆ ಜನ ರೊಚ್ಚಿಗೇಳುವುದು ನಿಶ್ಚಿತ ಎಂದರು.

ಈಗಾಗಲೇ ವಕ್ಫ್ ಕಾಯ್ದೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ರೈತರು ಆತಂಕದಲ್ಲಿದ್ದಾರೆ. ಪ್ರತಿ ದಿನ ಜಮೀನುಗಳ ದಾಖಲೆ ಪರಿಶೀಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬರುವ ಅಧಿವೇಶನದಲ್ಲಿ ವಕ್ಫ್ ಕಾಯ್ದೆಗೆ ತಿದ್ಧುಪಡಿ ತರಬೇಕಲ್ಲದೇ ಕರಾಳ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲಿಯೇ ರೈತರ ಬೇಡಿಕೆಯಂತೆ ಕಾಯ್ದೆ ತಿದ್ದುಪಡಿಗೊಳ್ಳುವ ವಿಶ್ವಾಸವಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ವಕ್ಫ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಸಚಿವರುಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ವಕ್ಫ್ ಸಚಿವ ಜಮೀರ್‌ಅಹ್ಮದ್ ಖಾನ್ ಅವರು ಇಂದೀಕರಣ ಮಾಡಲು ಆದೇಶಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಆಸ್ತಿಗಳನ್ನು ವಕ್ಫ್‌ಗೆ ಸೇರ್ಪಡೆಗೊಳಿಸಬಾರದು ಎಂದು ಸುತ್ತೋಲೆ ಹೊರಡಿಸುತ್ತಾರೆ. ಅಲ್ಲದೇ, ರೈತರಿಗೆ ನೀಡಿದ ನೋಟಿಸ್‌ಗಳನ್ನು ವಾಪಸ್ ಪಡೆಯುವಂತೆ ಆದೇಶ ಹೊರಡಿಸುತ್ತಾರೆ. ಅಷ್ಟಕ್ಕೆ ಈ ಸಮಸ್ಯೆ ಬಗೆ ಹರಿಯುವುದಿಲ್ಲ ಎಂದ ಶಹಾಪುರ, ವಕ್ಫ್ ಬೋರ್ಡ್ ರದ್ದಾಗಬೇಕಲ್ಲದೇ 1974ರ ಗೆಜೆಟ್ ಸಹ ರದ್ದಾಗಬೇಕೆಂದರು.

ವಕ್ಫ್ ಆಸ್ತಿಗಳನ್ನು ಬಹುತೇಕ ಕಾಂಗ್ರೆಸ್ ನಾಯಕರೇ ನುಂಗಿ ನೀರು ಕುಡಿದಿದ್ದಾರೆ. ಇಲ್ಲದೇ ಹೋದಲ್ಲಿ ಅನ್ವರ್ ಮನಪ್ಪಾಡಿ ವರದಿ ಆಧಾರದ ಮೇಲೆ ಸಿಬಿಐ ತನಿಖೆಗೆ ಸಿದ್ಧವೆಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಳ್ಳಲಿ ನೋಡೋಣ ಎಂದು ಸವಾಲೊಡ್ಡಿದರು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ನಗರದ ಐತಿಹಾಸಿಕ ಕೆರೆಗಳ ಜಾಗವೂ ಕಬಳಿಕೆಯಾಗುತ್ತಿದೆ. ಬೇಗಂ ತಲಾಬ್ ಕೆರೆ ಜಮೀನು ಒತ್ತುವರಿಯಾಗಿದೆ. ಅಲ್ಲದೇ, ಬಬಲೇಶ್ವರ ಕ್ಷೇತ್ರದಲ್ಲಿ ವಕ್ಫ್ ಹೆಸರಲ್ಲಿ ಜಮೀನು ಅತಿಕ್ರಮಣಗೊಂಡಿದೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಜ್ಯದಲ್ಲಿ ಮಠ-ಮಾನ್ಯಗಳ ಆಸ್ತಿಗಳನ್ನೂ ಕಬಳಿಸಲಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆ ಮನೆಯ ಜಗುಲಿಯೂ ಕಬಳಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಚಂದ್ರಶೇಖರ ಕವಟಗಿ ಸಂಜೀವ ಐಹೊಳಿ, ಚಿದಾನಂದ ಚಲವಾದಿ, ಉಮೇಶ ಕೋಳಕೂರ, ಗುರುಲಿಂಗಪ್ಪ ಅಂಗಡಿ, ರಾಜಶೇಖರ ಮಗಿಮಠ, ಸುರೇಶ ಬಿರಾದಾರ, ಸಾಬು ಮಾಶ್ಯಾಳ, ಶಿವರುದ್ರ ಬಾಗಲಕೋಟ ಮತ್ತಿತರರಿದ್ದರು. ಸಂಜೆ ರಾಷ್ಟ್ರಗೀತೆ ಹೇಳಿ, ಭಾರತ ಮಾತೆಗೆ ಜಯಘೋಷ ಹಾಕಿ ಧರಣಿ ಅಂತ್ಯಗೊಳಿಸಲಾಯಿತು.