ಹುಬ್ಬಳ್ಳಿ: ಶ್ರೀಕಾಂತ ಪೂಜಾರ ಅವರ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿಯಾಯಿತು. ಈಗ ಕಾಂಗ್ರೆಸ್ ಹೊಸ ಅಭಿಯಾನ ಶುರುವಿಟ್ಟುಕೊಂಡಿದೆ. ಅದೇನೆಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ ಬದಲು ಶ್ರೀಕಾಂತ ಪೂಜಾರ ಅವರಿಗೆ ಬಿಜೆಪಿ ಟಿಕೆಟ್ ನೀಡಲಿ ಎಂಬುದು !
ಕಳ್ಳಬಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ ಪೂಜಾರ 16 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡ ಪೂರೈಸಿ, ಅರ್ಹತೆ ಪಡೆದಿದ್ದಾನೆ. ಈತನ ಮೇಲೆ ಬಿಜೆಪಿಗೆ ಪ್ರೀತಿ-ಕಾಳಜಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಲಿ. ಹೊಸ ಪ್ರತಿಭೆಯನ್ನು ಕ್ಷೇತ್ರಕ್ಕೆ ಪರಿಚಯಿಸಲಿ ಎಂದಿರುವ ಪ್ರೋಮೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಬಿಜೆಪಿಗೆ ಇರಿಸುವಮುರಿಸು ತಂದರೆ, ಕಾಂಗ್ರೆಸ್‌ಗೆ ಹುಗ್ಗಿಯಷ್ಟೇ ಸವಿ ತಂದಿದೆ.