ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಭಿನ್ನರ ಗುಂಪಿನಲ್ಲಿ ಕಾಣಿಸಿಕೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಜಿಲ್ಲಾ ಬಿಜೆಪಿ ಶಾಕ್ ನೀಡಿದೆ. ನಮೋ ವೇದಿಕೆ ವಿರುದ್ಧ ಟೀಕೆ ಮಾಡಿದ್ದ ಕುಮಾರ್ ಆಪ್ತರಾದ ಐವರನ್ನು ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಚ್ಚಾಟಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಬಹಿರಂಗವಾಗಿ ವಕ್ಫ್ ವಿರುದ್ಧದ ಹೋರಾಟದಲ್ಲಿ ಕುಮಾರ್ ಕಾಣಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಪಕ್ಷದಿಂದ ದೂರ ಉಳಿದಿರುವ ಅವರು ಭಿನ್ನರ ಪಡೆಯಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಮನೆಯಲ್ಲೂ ಅನೇಕ ಬಾರಿ ಸಭೆ ನಡೆಸಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯ ಮುಖಂಡರೊಬ್ಬರು ಹೀಗೆ ಬಹಿರಂಗವಾಗಿ ತೊಡೆತಟ್ಟಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿತ್ತು. ಹಲವು ತಿಂಗಳಿಂದ ನಮೋ ವೇದಿಕೆ ಮುಖಂಡರ ವಿರುದ್ಧ ಕುಮಾರ್ ಆಪ್ತರು ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ಈಗ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ಕುಮಾರ್‌ಗೂ ಇದು ಪರೋಕ್ಷ ಎಚ್ಚರಿಕೆ ಎಂದೇ ಹೇಳಲಾಗುತ್ತಿದೆ.
ಹಾಗೆ ನೋಡಿದರೆ ಕುಮಾರ್ ಬಂಗಾರಪ್ಪ ಹಾಗೂ ನಮೋ ವೇದಿಕೆ ನಡುವಿನ ಶೀತಲಸಮರಕ್ಕೆ ಎರಡು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ವಿಧಾನಸಭೆ ಚುನಾವಣೆಗೆ ಐದಾರು ತಿಂಗಳು ಮುನ್ನವೇ ಫೀಲ್ಡ್‌ಗೆ ಇಳಿದಿದ್ದ ನಮೋ ವೇದಿಕೆ ಮುಖಂಡರು ಯಾವುದೇ ಕಾರಣಕ್ಕೂ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡಬಾರದೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅದಕ್ಕೂ ಮುನ್ನ ಮಂಡಲ ಅಧ್ಯಕ್ಷರ ನೇಮಕಾತಿ ವಿಷಯದಲ್ಲೂ ಬಿಜೆಪಿ ಮುಖಂಡರ ನಡುವೆಯೇ ವೈಮನಸ್ಸು ಉಂಟಾಗಿತ್ತು. ಆರಂಭದಲ್ಲಿ ಸೊರಬ ಬಿಜೆಪಿಯ ಭಿನ್ನಮತ ಶಮನ ಮಾಡದ ಜಿಲ್ಲಾ ಮುಖಂಡರು ಈಗ ಐವರನ್ನು ಉಚ್ಚಾಟಿಸಿ ಪರೋಕ್ಷ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.
ಉಚ್ಚಾಟನೆಗೊಂಡವರು:ಕುಮಾರ್ ಬಂಗಾರಪ್ಪ ಆಪ್ತರು ನಮೋ ವೇದಿಕೆ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯ ಮಾಡಿದ್ದರು. ಆದರೆ ಈಗ ಒತ್ತಾಯ ಮಾಡಿದವರನ್ನೇ ಬಿಜೆಪಿ ಉಚ್ಚಾಟಿಸಿದೆ. ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಬಗರ್‌ಹುಕುಂ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ, ಸೊರಬ ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಪ್ರಮುಖರಾದ ಶಿವನಗೌಡ ಅವರನ್ನು ಟಿ.ಡಿ.ಮೇಘರಾಜ್ ಉಚ್ಚಾಟಿಸಿದ್ದಾರೆ.