ಜಿಲ್ಲೆ

ಶಕ್ತಿಕೇಂದ್ರದಲ್ಲೇ ಶಕ್ತಿಯ ಕಲೆಯಿಲ್ಲ! - ಬಿಜೆಪಿ ಕಚೇರಿಯಲ್ಲಿ ಸುದರ್ಶನ ಹೋಮ, ಪೂಜೆಗೆ ಡಾ.ಭಂಡಾರಿ ಸಲಹೆ

Mangaluru - Nishantha Narayana

ಪುತ್ತೂರು: ಬಿಜೆಪಿ ಕಚೇರಿಯಲ್ಲಿ ಶಕ್ತಿಯ ಕಲೆಯಿಲ್ಲ. ಹಾಗಾಗಿ ನನಗೊಬ್ಬರು ತಿಳಿಸಿದಂತೆ ಕಚೇರಿಯಲ್ಲಿ ಸುದರ್ಶನ ಹೋಮ ಮತ್ತು ದುರ್ಗಾ ನಮಸ್ಕಾರ ಪೂಜೆ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಪಕ್ಷದ ಪ್ರಮುಖರಿಗೆ ಸಲಹೆ ನೀಡಿದರು.

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಅಂಗವಾಗಿ ವಾಜಪೇಯಿ ಅವರು ಪುತ್ತೂರಿನಲ್ಲಿ ಭೇಟಿ ನೀಡಿದ ಮನೆಗಳಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನೆಗೆ ಬಿಜೆಪಿ ಪದಾಽಕಾರಿಗಳು ಭೇಟಿ ನೀಡಿ ಸನ್ಮಾನಿಸುವ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

*ಹೊರಗಿನವರಿಗೆ ಮಣೆ ಹಾಕಿದ್ದು ತಪ್ಪು:

ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿ ದೊಡ್ಡ ಸಂಗತಿ ಮಾಡಿದ್ದರಿಂದ ಕಚೇರಿಯಲ್ಲಿ ಶಕ್ತಿಯಿಲ್ಲ. ಇದು ನಮ್ಮ ದೊಡ್ಡ ತಪ್ಪು. ನಮ್ಮಲ್ಲೇ ಇರುವ ಮಾಣಿಕ್ಯಗಳನ್ನು ಗಮನಿಸದೆ ಇರುವುದು ಇನ್ನೊಂದು ತಪ್ಪು. ಈಗಿನ ಮಕ್ಕಳು ಜೈ ಶ್ರೀರಾಮ್ ಎಂದರೆ ಬಿಜೆಪಿ, ಹಿಂದುತ್ವ ಎಂದುಕೊಂಡಿದ್ದಾರೆ. ಹಿಂದುತ್ವ ಅದಲ್ಲ. ಬಿಜೆಪಿಗೆ ಬರಬೇಕಾದರೆ ನಾವು ಹಿಂದೆ ಕಷ್ಟಪಟ್ಟ ವಿಚಾರ ಯಾರಿಗೂ ಗೊತ್ತಿಲ್ಲ. ಜೈ ಶ್ರೀರಾಮ್ ಎಂದು ಕೇಸರಿ ಬಟ್ಟೆ ಸುತ್ತಿದ ಕೂಡಲೇ ಹಿಂದುತ್ವ ಆಗುವುದಿಲ್ಲ. ತ್ಯಾಗ ಬೇಕು. ಸರ್ವಸ್ವವನ್ನು ದಾನ ಮಾಡಬೇಕು. ದೇಶದ ಮೇಲೆ ಭಕ್ತಿ ಬೇಕು. ನಾಯಕರು ಹೇಳಿದ್ದನ್ನು ಕೇಳಬೇಕು ಎಂದರು.

*ವಾಜಪೇಯಿ ಮಾದರಿ:

ಪುತ್ತೂರಿಗೆ ವಾಜಪೇಯಿ ಆಗಮನದ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷನಾಗಿದ್ದೆ. ಅವರಿಗೆ ನೀಡಿದ ನಿಽ ಸಮರ್ಪಣೆಯ ಹಣವನ್ನು ಪುನಃ ಪಕ್ಷದ ಖರ್ಚಿಗೆಂದು ಹಿಂದಿರುಗಿಸಿದ್ದರು. ಇವತ್ತು ರಾಜಕಾರಣದಲ್ಲಿ ಸ್ವಾರ್ಥ ತುಂಬಿದೆ. ಆದರೆ ಸ್ವಾರ್ಥವಿಲ್ಲದ ರಾಜಕಾರಣಕ್ಕೆ ವಾಜಪೇಯಿ ಮಾದರಿ ಎಂದರು.