ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿದೆ, ಈ ಮೂರು ವರ್ಷದ ಅವಧಿಯಲ್ಲಿ ನೂರಾರು ಯೋಜನೆಗಳ ಮೂಲಕ ಸರ್ಕಾರ ಜನಮನ್ನಣೆಗಳಿಸಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಹೊರವಲಯದ ಎನ್‌ಎಸ್ ಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರ ಯುವಜನಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
2 ವರ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವ ಹಾಗೂ ಈ ಒಂದು ವರ್ಷದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಸುಭದ್ರ ಆಡಳಿತ ನೀಡಿದೆ, ನೆರೆಹಾವಳಿ, ಕೋವಿಡ್‌ನಂಥ ಪ್ರಾಕೃತಿಕ ವಿಪತ್ತಿನ ಸಮಯದಲ್ಲಿ ಸಮಯೋಜಿತ ಆಡಳಿತದ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ ಎಂದರು. ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 8 ವರ್ಷದ ಸುದೀರ್ಘ ಅವಧಿಯಲ್ಲಿ ಜನಪರ ಯೋಜನೆಗಳ ಮೂಲಕ ಜನಮನಗೆದ್ದಿದೆ, ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರವಿದ್ದು ಮುಂದಿನ ಚುನಾವಣೆಯಲ್ಲಿಯೂ ಪಕ್ಷ ಕಮಾಲ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಸ್ತಿನ ಪಕ್ಷ: ಬಿಜೆಪಿ ಶಿಸ್ತಿನ ಪಕ್ಷ, ಕಾರ್ಯಕರ್ತರು ಹಾಗೂ ಮುಖಂಡರು ಶಿಸ್ತಿನ ಸಿಪಾಯಿಗಳಿದ್ದಂತೆ ಆದ್ದರಿಂದ ಜನೋತ್ಸವ ಕಾರ್ಯಕ್ರಮದಲ್ಲೂ ಇದೇ ಶಿಸ್ತನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಸಚಿವರು ಕರೆ ನೀಡಿದರು.
ಸಿಎಂ ಸ್ಥಾನಕ್ಕೆ ಕೈನಲ್ಲಿ ಕಿತ್ತಾಟ: ಇನ್ನೂ ಹುಡುಗಿ ನೋಡಿಲ್ಲ, ಮದುವೆ ಆಗಿಲ್ಲ, ಸೀಮಂತ ಆಗಿಲ್ಲ ಆಗಲೇ ಕಾಂಗ್ರೆಸ್‌ನವರು ಮಗುಗೆ ಸೀಟ್ ಹುಡುಕಲು ಹೋಗುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದರು. ಕಾಂಗ್ರೆಸ್ ನಲ್ಲಿ ಎರಡು ಗುಂಪಿದೆ. ಸಿದ್ದರಾಮೋತ್ಸವ ಬಳಿಕ 5 ಗುಂಪುಗಳಾಗಲಿವೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಜಾತಿಗೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದರು. ಒಕ್ಕಲಿಗರ ಸಮುದಾಯ ಯಾರೊಬ್ಬರ ಆಸ್ತಿಯಲ್ಲ, ಅವರವರ ವೈಯಕ್ತಿಕ ಲಾಭಗಳಿಗೆ ಸಮುದಾಯದ ಹೆಸರು ಹೇಳಿದರೆ ಒಕ್ಕಲಿಗರು ದಡ್ಡರಲ್ಲ ಎಂದು ಹೇಳಿದರು. ಯಾರಿಗೆ ಯೋಗ್ಯತೆ, ನಾಯಕತ್ವಗುಣ, ಸಮುದಾಯವನ್ನು ಕಾಪಾಡುವ ತಾಕತ್ತು ಇರುತ್ತದೋ ಅವರನ್ನು ಆಯಾ ಸಮುದಾಯಗಳು ನಂಬುತ್ತವೆ. ಎಲ್ಲರನ್ನೂ ಕರೆದುಕೊಂಡು ಹೋಗುವ ವ್ಯಕ್ತಿತ್ವ ಯಾರಿಗೆ ಇರುತ್ತದೋ ಅವರು ನಾಯಕರಾಗುತ್ತಾರೆ ಎಂದರು.
ಮುಖಂಡರು ಜವಾಬ್ದಾರಿ ನಿರ್ವಹಿಸಬೇಕು: ವಿವಿಧ ತಾಲೂಕುಗಳಿಂದ ಬರುವ ಜನರು ಕಾರ್ಯಕ್ರಮದ ಬಳಿಕ ಮರಳುವವರೆಗೆ ಆಯಾ ಭಾಗದ ಪಕ್ಷದ ಮುಖಂಡರು ಎಲ್ಲ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸೂಚನೆ ನೀಡಿದರು. ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಮುಖಂಡರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಕಾಂಗ್ರೆಸ್ ದೇಶವನ್ನು ತುಂಡರಿಸುವ ಕೆಲಸ ಮಾಡುತ್ತಿದೆ. ದೇಶವನ್ನು ಇಬ್ಭಾಗ ಮಾಡಿದ್ದು, ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿದ ಕಾಂಗ್ರೆಸ್‌ನನ್ನು ಜನ ಸಂಪೂರ್ಣವಾಗಿ ದಿಕ್ಕರಿಸಿದ್ದಾರೆ ಎಂದರು.