ಜಿಲ್ಲೆ

ಗುಜರಾತ್‌ನಲ್ಲಿ ಪ್ರಚಂಡ ಗೆಲುವು: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಮಂಡ್ಯ: ಗುಜರಾತ್‌ನಲ್ಲಿ ಬಿಜೆಪಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಹಿಂದುತ್ವವಾದ, ರಾಷ್ಟ್ರೀಯ ಚಿಂತನೆಗಳು ಹಾಗೂ ಅಭಿವೃದ್ಧಿ ಮಂತ್ರಕ್ಕೆ ಮತದಾರರು ಮನಸೋತು ಸತತ 7ನೇ ಬಾರಿ ಗುಜರಾತ್‌ನಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಪ.ನಾ.ಸುರೇಶ್, ನಿತ್ಯಾನಂದ, ಶಶಿಕುಮಾರ್, ಶಿವಲಿಂಗಯ್ಯ, ಮಹೇಶ್, ಹೊಸಹಳ್ಳಿ ಸಿದ್ದರಾಜು, ಪ್ರಸನ್ನಕುಮಾರ್, ಸಿ.ಟಿ. ಮಂಜುನಾಥ್, ವಿವೇಕ್ ಇತರರಿದ್ದರು. ಇದೇ ವೇಳೆ ಕಾರ್ಯಕರ್ತರು ನೃತ್ಯಮಾಡಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.