ಮಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಮಂಗಳವಾರ ನಡೆದ ಎಸ್ಐಆರ್ ಜನಜಾಗೃತಿ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಿದರು. ಯು.ಟಿ. ಖಾದರ್, ಮಂಜುನಾಥ್ ಭಂಡಾರಿ, ವಿ.ಆರ್. ಸುದರ್ಶನ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಇದ್ದರು. 
ಜಿಲ್ಲೆ

ಎಸ್ಐಆರ್ ನಲ್ಲಿ ಬಿಜೆಪಿ ಆರ್‌ಎಸ್‌ಎಸ್ ಪಿತೂರಿ

ಪ್ರಮುಖ ಮುಖ್ಯಾಂಶಗಳು

  • ಬಿ.ಕೆ. ಹರಿಪ್ರಸಾದ್ ಹೇಳಿಕೆ
  • ಎಸ್ಐಆರ್ ಜನಜಾಗೃತಿ ಸಮಾವೇಶ
  • ಎಚ್ಚರ ತಪ್ಪಿದರೆ ಸಂವಿಧಾನವೇ ಬುಡಮೇಲು
ಮಂಗಳೂರು: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವೇಳೆಯಲ್ಲಿ ನೈಜ ಮತದಾರರನ್ನು ತೆಗೆದು ಹಾಕುವಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಿತೂರಿಯಿದೆ. ಇದಕ್ಕೆ ಚುನಾವಣಾ ಆಯೋಗವನ್ನು ಬಳಸಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹೇಳಿದರು.
ಮಂಗಳೂರಿನ ಕುದುಮುಲ್ ರಂಗರಾವ್ ಪುರಭವನದಲ್ಲಿ ಕಾಂಗ್ರೆಸ್ ವತಿಯಿಂದ ಮಂಗಳವಾರ ನಡೆದ ಎಸ್ಐಆರ್ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮ್ಯಾಪಿಂಗ್ ಕೂಡ ಸರಿಯಾಗಿ ನಡೆದಿಲ್ಲ. ಬೇರೆ ರಾಜ್ಯದಲ್ಲಿ ಆದಂತೆ ಇಲ್ಲಿ ಆಗಬಾರದು. ಕಾಂಗ್ರೆಸ್ ಬೆಂಬಲಿತರನ್ನು ಗುರುತಿಸಿ ಪಟ್ಟಿಯಿಂದ ಅಳಿಸಿ ಹಾಕಿ ವ್ಯವಸ್ಥಿತವಾಗಿ ಮತದಾನದ ಹಕ್ಕನ್ನು ಕಸಿಯುವ ಯತ್ನ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರು, ನಾಯಕರು ದಿಕ್ಸೂಚಿಯಿಂದಲೇ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಬಿಜೆಪಿ, ಆರ್‌ಎಸ್‌ಎಸ್ ತಂಡವಾಗಿ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಅವರು ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ನಾವು ಎಚ್ಚರ ತಪ್ಪಿದರೆ ಕಟ್ಟಕಡೆಯ ನೈಜ ಮತದಾರರು ಅನ್ಯಾಯಕ್ಕೊಳಗಾಗುತ್ತಾರೆ. ಮತ ಕಳ್ಳತನವಾಗದಂತೆ ನೋಡಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದೆ. ಎಚ್ಚರ ತಪ್ಪಿದರೆ ಸಂವಿಧಾನವೇ ಬುಡಮೇಲು ಮಾಡಲಿದ್ದಾರೆ. ಅದಕ್ಕೆ ಅವಕಾಶ ನೀಡದ ರೀತಿ ಪಕ್ಷದ ಬಿಎಲ್‌ಒಗಳು ಕಾರ್ಯ ನಿರ್ವಹಿಸಬೇಕು ಎಂದರು.

ಆರ್‌ಎಸ್‌ಎಸ್ ಜೊತೆ ರಾಜಿ ಇಲ್ಲ

ಕಾಂಗ್ರೆಸ್ ಎಸ್ಐಆರ್ ಜಾಗೃತಿ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಮಾತನಾಡಿ, ಎಸ್‌ಬಿಆರ್‌ನಲ್ಲಿ ಬಿಜೆಪಿಯ ಸಂಚು ಗುಪ್ತವಾಗಿ ಈಗ ಉಳಿದಿಲ್ಲ. ಆಯೋಗವನ್ನು ದುರುಪಯೋಗ ಮಾಡಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಸೌಹಾರ್ದತೆಗೆ ಧಕ್ಕೆ ಮಾಡುವ ಆರ್‌ಎಸ್‌ಎಸ್ ಜೊತೆ ನಮಗೆ ರಾಜಿಯೇ ಇಲ್ಲ ಎಂದು ಹೇಳಿದರು.
ಉದ್ಘಾಟನೆಯ ಬಳಿಕ ಬಿಎಲ್‌ಒಗಳ ಜೊತೆ ಸಂವಾದ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ ಎಸ್‌ಬಿಆರ್‌ ಜಾಗೃತಿ ಕುರಿತಂತೆ ಬಿಎಲ್‌ಒಗಳಿಗೆ ಮಾಹಿತಿ ನೀಡಿದರು. ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಂಕಾಳ ವೈದ್ಯ, ಕೆ. ಜಯಪ್ರಕಾಶ್ ಹೆಗ್ಡೆ, ಮುಖಂಡರಾದ ಜೆ.ಆರ್. ಲೋಬೋ, ಬಿ. ಇಬ್ರಾಹಿಂ, ಇನಾಯತ್ ಅಲಿ, ಮಿಥುನ್ ರೈ, ಜಿ.ಎ. ಬಾವಾ, ಕೃಷ್ಣಪ್ಪ, ಕೆ.ಎ. ಅಂಶುಮಾನ್, ಅಶೋಕ್ ಕುಮಾರ್ ಕೊಡವೂರು, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾವಣ್ಯ ಬಲ್ಲಾಳ್, ರಕ್ಷಿತ್ ಶಿವರಾಂ, ಮಂಜುನಾಥ್ ಪೂಜಾರಿ, ಎಂ.ಜಿ. ಗಫೂರ್, ಪ್ರಸಾದ್‌ರಾಜ್ ಕಾಂಚನ್, ಭರತ್ ಮುಂಡೋಡಿ, ಶಂಭು ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಟಿ.ಎಂ. ಶಹೀದ್, ಎಂ.ಎಸ್. ಮೊಹಮ್ಮದ್, ಕಿಶನ್ ಹೆಗ್ಡೆ ಕೊಳ್ಳೆಬೈಲು ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪದ್ಮರಾಜ್ ಪೂಜಾರಿ ವಂದಿಸಿದರು.

ಜೂ. 30ರಿಂದ ಕಾರ್ಯ ಪ್ರಾರಂಭ

ರಾಜ್ಯದಲ್ಲಿ ಜೂ. 29ಕ್ಕೆ ಮತದಾರರ ಪಟ್ಟಿ ಶೂನ್ಯವಾಗಲಿದೆ. ಜೂ. 30ರಿಂದ ಎಸ್ಐಆರ್ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ. ಆ. 5ಕ್ಕೆ ಡ್ರಾಫ್ಟ್ ರೋಲ್ ಪಬ್ಲಿಷ್ ಮಾಡಲಿದ್ದಾರೆ. ಬಿಟ್ಟು ಹೋದ ಹೆಸರುಗಳಿದ್ದರೆ ಮತ್ತೆ ಸೇರ್ಪಡೆಗೊಳಿಸಲು ಆಕ್ಷೇಪಣೆಗಾಗಿ 1 ತಿಂಗಳ ಕಾಲಾವಕಾಶವಿದೆ. ಸೆ. 4ರಂದು ಆಕ್ಷೇಪಣೆ ಕೊನೆಗೊಳ್ಳಲಿದೆ. ಅ. 7ರಂದು ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ ಎನ್ನುವ ಮಾಹಿತಿಯನ್ನು ವಿ.ಆರ್. ಸುದರ್ಶನ್ ಸಭೆಗೆ ನೀಡಿದರು.

ಕೊಡುವುದಾದರೆ ಹಣ ಕೊಡಿ ಎಂದ ಹರಿಪ್ರಸಾದ್!

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಬಿ.ಕೆ. ಹರಿಪ್ರಸಾದ್ ಅವರು ಈಗಾಗಲೇ ತಮಗೆ ಸನ್ಮಾನ, ಗೌರವ ಬೇಡ, ಏನಾದರೂ ಕೊಡುವುದಿದ್ದರೆ ಪಕ್ಷದ ನಿಧಿಗೆ ಹಣ ಕೊಡಿ ಎಂದು ಹೇಳಿದ್ದರು. ತಮ್ಮ ಆಗಮನಕ್ಕೆ ಬ್ಯಾನರ್, ಬಂಟಿಂಗ್ಸ್ ಹಾಕುವುದು ಬೇಡ ಎಂದು ಹೇಳಿರುವ ಕಾರಣ ಅವರ ಆಶಯದಂತೆ ಬ್ಯಾನರ್, ಬಂಟಿಂಗ್ಸ್ ಹಾಕಿಲ್ಲ. ಆ ಪಾಲಿನ 20 ಸಾವಿರ ರೂ. ಹಣವನ್ನು ಐವನ್ ಡಿಸೋಜ ಅವರು ಚೆಕ್ ರೂಪದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದರು.