ಚಿಂತಾಮಣಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮುಂದುವರಿಸಿದ್ದು ಸ್ವಾತಂತ್ರ್ಯ ಚಳವಳಿಯ ವೇಳೆ ಆರ್‌ಎಸ್‌ಎಸ್ ಸಿದ್ಧಾಂತದ ನಾಯಕರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದಲ್ಲದೆ ಅನೇಕ ಹೋರಾಟಗಾರರು ಸೆರೆಯಾಗಿ, ಜೈಲಿಗೆ ಹೋಗಲು ಸಹಾಯ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೃಹತ್ ಪಾದಯಾತ್ರೆ ಮತ್ತು ಬೈಕ್ ರ‌್ಯಾಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ನಾಯಕರು ಯಾರಾದರೂ ಸತ್ತಿದ್ದಾರಾ? ಎಂದು ಪ್ರಶ್ನೆ ಎಸೆದರು. ಇಂದು ಹರ್ ಘರ್ ತಿರಂಗಾ ಯಾತ್ರೆಯ ಮೂಲಕ ದೇಶಭಕ್ತಿಯ ಬಗ್ಗೆ ಪಾಠ ಮಾಡಲಾಗುತ್ತಿದೆ. ಆದರೆ, ಹಿಂದೆ ರಾಷ್ಟ್ರಧ್ವಜವನ್ನು ಆರ್‌ಎಸ್‌ಎಸ್ ಒಪ್ಪಿಕೊಂಡಿರಲಿಲ್ಲ. ಅದರ ಸಿದ್ಧಾಂತದ ಪಾಲಕರಾದ ಸಾವರಕರ್, ಗೋಳ್ವಾಳಕರ್ ಹಾಗೂ ಆರ್ಗನೈರ್ಸರ್ ಪತ್ರಿಕೆಯವರು ಬಹಿರಂಗವಾಗಿ ವಿರೋಧಿಸಿದ್ದರು ಎಂದು ಟೀಕಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಹಲವರು ಕಾಂಗ್ರೆಸ್‌ಗೆ ಸೇರಿದ್ದವರು. ದೊಡ್ಡ ಸ್ವಾತಂತ್ರ್ಯ ಹೋರಾಟ ನಡೆದಿದ್ದರಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು ಎಂದರು.
ಬಿಜೆಪಿ ನಾಯಕರು ಢೋಂಗಿಗಳು. ಅಧಿಕಾರಕ್ಕಾಗಿ ಸುಳ್ಳು ಹೇಳುವುದು, ನಾಟಕವಾಡುವುದನ್ನು ದೊಡ್ಡ ಸಾಧನೆಯನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಹಿತವನ್ನು ಕಾಪಾಡುತ್ತಿಲ್ಲ. ಇದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ವಿರೋಧಿ ಆಡಳಿತ ನೀತಿಗಳ ಜಾರಿಗೊಳಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಶಾಸಕರಾದ ರಾಮಲಿಂಗಾರೆಡ್ಡಿ, ಕೆ.ಆರ್.ರಮೇಶ್ ಕುಮಾರ್, ಸಿ.ಬಿ.ಕೃಷ್ಣಭೈರೇಗೌಡ, ಎನ್.ಎಚ್.ಶಿವಶಂಕರರೆಡ್ಡಿ, ಶರತ್ ಬಚ್ಚೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ವಿಧಾನಪರಿಷತ್ ಮಾಜಿ ಸದಸ್ಯ ನಜೀರ್ ಅಹಮದ್ ಮತ್ತಿತರರು ಇದ್ದರು.
ಬಿಜೆಪಿ ವಿಲ ವಿಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶದ ಜನರ ಆಶಯಕ್ಕೆ ಅನುಗುಣವಾಗಿ ಆಡಳಿತ ನಡೆಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ಮರೆಮಾಚಲು ಸುಳ್ಳು ಹಬ್ಬಿಸಲಾಗುತ್ತಿದೆ. ಪ್ರಶ್ನಿಸಿದವರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇದಕ್ಕೆಲ್ಲ ತ್ವರಿತವಾಗಿ ಉತ್ತರ ಸಿಗಲಿದೆ ಎಂದರು.
ಎಂ.ಸಿ.ಸುಧಾಕರ್ ಪರ ಪ್ರಚಾರ: ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ಪರ ಬ್ಯಾಟ್ ಬೀಸುವ ಮೂಲಕ ವಿಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರು ಪ್ರಚಾರ ಕೈಗೊಂಡರು. ಕೆಲ ಕಾರಣಗಳಿಂದ ಸುಧಾಕರ್ ನಮ್ಮ ಜತೆ ಇರಲಿಲ್ಲ. ಈಗ ಮತ್ತೆ ಬಂದಿದ್ದಾರೆ. ಈ ಭಾಗದ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆಯ ಬಹುಪಾಲು ಇವರದ್ದೇ. ಹಾಗೆಯೇ ಮುಂಬರುವ ದಿನಗಳಲ್ಲಿ ಚಿಂತಾಮಣಿ ಕ್ಷೇತ್ರವು ಅಭಿವೃದ್ಧಿಯಾಗುತ್ತದೆ. ಇದಕ್ಕೆ ಬೆಂಬಲ ಅಗತ್ಯ ಎಂದು ಸಿದ್ದರಾಮಯ್ಯ ತಿಳಿಸಿದರೆ, ಡೆಲ್ಲಿ ವರಿಷ್ಠರ ಸಮ್ಮುಖದಲ್ಲಿ ಸುಧಾಕರ್ ಪಕ್ಷ ಸೇರ್ಪಡೆಯಾಗಿದೆ. ಇದರಿಂದ ಭಿನ್ನಾಭಿಪ್ರಾಯದ ಮಾತೇ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಡಿಕೆಶಿ ಕರೆ ನೀಡಿದರು.
ಬೃಹತ್ ಶಕ್ತಿ ಪ್ರದರ್ಶನ ಕಾಂಗ್ರೆಸ್ ಮರು ಸೇರ್ಪಡೆಯಾದ ಬಳಿಕ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ಬೈಕ್ ರ‌್ಯಾಲಿ ಮತ್ತು ಪಾದಯಾತ್ರೆ ಮೂಲಕ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶಿಸಿದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಎದುರು ಹಾಕಿಕೊಂಡಿದ್ದ ಸುಧಾಕರ್ ಕಾಂಗ್ರೆಸ್ ತ್ಯಜಿಸಿದ್ದರು. ಬಳಿಕ ಚುನಾವಣೆಯಲ್ಲಿ ನಿರಂತರವಾಗಿ ಅತ್ಯಲ್ಪ ಮತಗಳ ಅಂತರದಲ್ಲಿ 2 ಬಾರಿ ಸೋತಿದ್ದರು. ಇದರ ನಡುವೆ ನಗರಸಭೆ, ಗ್ರಾಪಂ, ತಾಪಂ, ಜಿಪಂ, ಕೋಚಿಮುಲ್, ಎಪಿಎಂಸಿ, ಟಿಎಪಿಸಿಎಂಎಸ್ ಸೇರಿ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಪಣ ತೊಟ್ಟಿದ್ದ ಮಾಜಿ ಶಾಸಕರು, ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‌ಕುಮಾರ ನೇತೃತ್ವದಲ್ಲಿ ಘಟ್ ಬಂಧನ್ ರಚಿಸಿಕೊಂಡು ಸೇಡು ತೀರಿಸಿಕೊಂಡಿದ್ದರು. ಇದೇ ಹುರುಪಿನಲ್ಲಿ ಮತ್ತೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮತ್ತೆ ಕೈ ಸೇರ್ಪಡೆಯಾದರು.
ಹೂವಿನ ಸುರಿಮಳೆ: ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಪಾದಯಾತ್ರೆ ಮತ್ತು ಬೈಕ್ ರ‌್ಯಾಲಿ ನಡೆಯಿತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸ್ವಪಕ್ಷೀಯರು ತಾಲೂಕಿನ ಪ್ರವೇಶ ಗಡಿ ಪ್ರದೇಶ ಸಂತೇಕಲ್ಲಹಳ್ಳಿಯಲ್ಲಿ ಬೃಹತ್ ಹೂವಿನ ಹಾರ ಹಾಕಿ ಬರಮಾಡಿಕೊಂಡರು.
ಬೆಂಗಳೂರು ರಸ್ತೆಯ ಕೈವಾರ ಕ್ರಾಸ್‌ನಿಂದ ಕನ್ನಂಪಲ್ಲಿ ವೀರಾಂಜನೆಯ ದೇವಸ್ಥಾನದವರೆವಿಗೂ ಬೈಕ್ ರ‌್ಯಾಲಿಯಲ್ಲಿ ಕರೆ ತರಲಾಯಿತು. ಚಿಂತಾಮಣಿಯ ಕೋಚಿಮುಲ್ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು ನೇತೃತ್ವದಲ್ಲಿ ಕ್ರೇನ್ ಮೂಲಕ ಬೃಹದಾಕಾರದ ಹೂವಿನ ಹಾರವನ್ನು ನಾಯಕರಿಗೆ ಹಾಕಿಸಲಾಯಿತು. ಕನ್ನಂಪಲ್ಲಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಆರಂಭವಾಯಿತು. ಬೆಂಗಳೂರು ಜೋಡಿ ರಸ್ತೆ, ಗಜಾನನ ಸರ್ಕಲ್, ಎಂ.ಜಿ.ರಸ್ತೆಯ ಮೂಲಕ ವಾಲ್ಮೀಕಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ವೇದಿಕೆ ಸಮಾರಂಭ ಆಯೋಜನೆಯ ಕಿಶೋರ ವಿದ್ಯಾ ಭವನದಲ್ಲಿ ಅಂತ್ಯಗೊಳಿಸಲಾಯಿತು. ಬೆಂಬಲಿಗರು ಪಟಾಕಿ ಸಿಡಿಸಿ, ಹೂ ಚೆಲ್ಲಿ ಸಂಭ್ರಮಿಸಿದರು.
ಮಳೆಗೆ ವೇದಿಕೆ ಸಮಾರಂಭ ಅಸ್ತವ್ಯಸ್ತ: ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಲ್ಲಿಯೇ ಪಾದಯಾತ್ರೆ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮಾತನಾಡುತ್ತಿದ್ದ ವೇಳೆ ಜೋರಾಗಿ ಮಳೆ ಬಂತು. ಇದರ ನಡುವೆಯೂ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದ್ದು ಗಮನ ಸೆಳೆಯಿತು.
ಟ್ರಾಫಿಕ್ ಜಾಮ್: ಕಾಂಗ್ರೆಸ್ ಬೃಹತ್ ಯಾತ್ರೆ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಜನರು ಕಿರಿಕಿರಿ ಅನುಭವಿಸಬೇಕಾಯಿತು. ಪ್ರಮುಖ ವೃತ್ತಗಳಲ್ಲಿ ನಾಯಕರ ಭಾಷಣ, ಬೈಕ್‌ಗಳ ರ‌್ಯಾಲಿ ಸೇರಿ ಹಲವು ಚಟುವಟಿಕೆಗೆ ರಸ್ತೆ ಸಂಚಾರ ಬಂದ್ ಆಗಿತ್ತು. ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದರಿಂದ ಜನರು ಓಡಾಡಲು ಪರದಾಡುವಂತಾಯಿತು. ಮತ್ತೆ ಹತೋಟಿಗೆ ತರುವಲ್ಲಿ ಸಂಚಾರಿ ಠಾಣೆಯ ಪೊಲೀಸರು ಹರಸಾಹಸ ಮಾಡಬೇಕಾಯಿತು.