ಜಿಲ್ಲೆ

ಹಳ್ಳಿ ಫೈಟ್​ಗೆ ಕಹಳೆ ಮೊಳಗಿಸಿದ ಬಿಜೆಪಿ

Haveri

ಹಿರೇಕೆರೂರ: ಭ್ರಷ್ಟಾಚಾರ ಮಾಡಿಲ್ಲ ಅಂದರೆ ಅದು ಕಾಂಗ್ರೆಸ್ ಪಕ್ಷವೇ ಅಲ್ಲ. ಇದರ ಪರಿಣಾಮವಾಗಿಯೇ ಕಾಂಗ್ರೆಸ್ ಇಂದು ಅಧೋಗತಿಗೆ ತಲುಪುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮಾಯಿ ಆರೋಪಿಸಿದರು. ಪಟ್ಟಣದ ಗುರುಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಿಂದ ಬಿಡುಗಡೆ ಮಾಡಿದ ಅನುದಾನ ನೇರವಾಗಿ ಗ್ರಾಪಂಗೆ ಬಂದು ತಲುಪುತ್ತಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ. ಎಲ್ಲಿಯೂ ಒಂದು ರೂಪಾಯಿ ಪೋಲಾಗದಂತೆ ನೇರವಾಗಿ ಅನುದಾನವನ್ನು ಗ್ರಾಪಂಗೆ ನೀಡುತ್ತಿದೆ. ಇದು ಬಿಜೆಪಿ ಪಾರದರ್ಶಕ ಆಡಳಿತದ ನಿದರ್ಶನವಾಗಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಹೆಚ್ಚಿನ ಸಾಲ ಮಾಡಿ ರಾಜ್ಯ ಸರ್ಕಾರಕ್ಕೆ ಹೊರೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ನಾವು ತೆಗೆದುಕೊಂಡಿದ್ದು ಕೇವಲ 52 ಸಾವಿರ ಕೋಟಿ ರೂ. ಇಷ್ಟು ಸಾಲ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಈ ಹಿಂದಿನ ಎಲ್ಲ ಸಿಎಂಗಳು ಸೇರಿ 1.20 ಲಕ್ಷ ಕೋಟಿ ರೂ. ಸಾಲ ಮಾಡಿದ್ದರೆ, ಸಿದ್ದರಾಮಯ್ಯ ಒಬ್ಬರೇ 2.40 ಲಕ್ಷ ಕೋಟಿ ರೂ. ಸಾಲ ಮಾಡಿ ಹೋಗಿದ್ದಾರೆ. ಇದನ್ನು ಬಿಜೆಪಿ ಸರ್ಕಾರ ಬಂದ ಮೇಲೆ ತೀರಿಸಲಾಗಿದೆ ಎಂದರು.

ಹಣ ಬಲ, ತೋಳ್ಬಲದಿಂದ ಚುನಾವಣೆ ಗೆಲ್ಲದೆ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಜನಪರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ಗ್ರಾಪಂ ಚುನಾವಣೆಯನ್ನು ಗೆಲ್ಲಲು ಕಾರ್ಯಕರ್ತರು ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸಲಹೆ ನೀಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ನೆರೆ, ಕೋವಿಡ್, ಬರ ಮೊದಲಾದ ಸಂಕಷ್ಟಗಳು ಎದುರಾದವು. ಈ ಎಲ್ಲ ಸಂಕಷ್ಟಗಳನ್ನು ಪರಿಹರಿಸಿ ರಾಜ್ಯದಲ್ಲಿ ಸಮರ್ಥ ಆಡಳಿತವನ್ನು ಅವರು ನೀಡಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ತನ್ನ ಬೆಳೆಯನ್ನು ಎಪಿಎಂಸಿ ಸೇರಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದಕ್ಕೆ ವಿರೋಧ ಪಕ್ಷಗಳು ಅಪಪ್ರಚಾರ ನಡೆಸಿದವು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ, ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮೊದಲಾದವರು ಪಾಲ್ಗೊಂಡಿದ್ದರು.