ಜಿಲ್ಲೆ

ರಾಜ್ಯಸರ್ಕಾರದಿಂದ ಒಡೆದು ಆಳುವ ತಂತ್ರ: ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ವಾಗ್ದಾಳಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯ ಸರ್ಕಾರ ಜನಗಣತಿ ಮಾಡಿಸುವ ಮೂಲಕ ಹಿಂದುಳಿದ ವರ್ಗದ ಜಾತಿಗಳನ್ನು ಬ್ರಿಟಿಷರಂತೆ ಒಡೆದು ಆಳುವ ತಂತ್ರಕ್ಕೆ ಮುಂದಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ವಾಗ್ದಾಳಿ ನಡೆಸಿದರು.

ಗಣತಿಯಲ್ಲಿ ಒಕ್ಕಲಿಗರ 110ಕ್ಕೂ ಹೆಚ್ಚಿನ ಉಪಜಾತಿಗಳನ್ನು ಪತ್ಯೇಕವಾಗಿ ಗುರುತಿಸಲಾಗಿದೆ. ಇದರೊಂದಿಗೆ ಹಿಂದುಳಿದ ವರ್ಗದ ಜಾತಿಗಳ ನಡುವೆ ಒಡಕನ್ನುಂಟು ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬಲವರ್ಧನೆಗಾಗಿ ನಡೆಯಬೇಕಿದ್ದ ಸಮೀಕ್ಷೆಯ ವರದಿ ಜಾತಿಗಣತಿಯಾಗಿ ಮಾರ್ಪಾಡು ಮಾಡಿರುವ ಸಿದ್ದರಾಮಯ್ಯ ಸರ್ಕಾರ, ಈ ಸಮೀಕ್ಷೆ ಸಂಬಂಧ ಚರ್ಚೆಗೆ ಏ.17ರಂದು ಸಂಪುಟ ಸಮಿತಿಯ ಸಭೆ ಕರೆಯಲಾಗಿದೆ. ಈ ಹಿಂದೆಯೂ ತಮ್ಮ ಅಧಿಕಾರಾವಧಿಯಲ್ಲಿ ಲಿಂಗಾಯತ ಮತ್ತು ವೀರಶೈವರು ಬೇರೆ ಎಂದು ಸಮೀಕ್ಷೆ ನಡೆಸಿ ಸಮುದಾಯವನ್ನು ಹೊಡೆಯುವ ಕೆಲಸಕ್ಕೆ ಮುಂದಾಗಿದ್ದರು. ಈಗಲೂ ಒಕ್ಕಲಿಗ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಒಡೆದು ಆಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕಾಂತರಾಜ್ ಆಯೋಗ 20 ದಿನದಲ್ಲಿ ರಾಜ್ಯದ 7 ಕೋಟಿ ಜನರ ಸಮೀಕ್ಷೆ ನಡೆಸಿದ್ದೇವೆ ಎಂದು ಹೇಳಿಕೊಂಡಿರುವುದು ಅವೈಜ್ಞಾನಿಕ. ಈ ವರದಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಈ ಸಂಬಂಧ ಒಕ್ಕಲಿಗರ ಸಂಘದ 35 ನಿರ್ದೇಶಕರ ಸಭೆ ನಡೆಸಿ ಚರ್ಚಿಸಲಾಗುವುದು. ಜತೆಗೆ ಮಠಾಧೀಶರ ಅಭಿಪ್ರಾಯ ಪಡೆದು ಒಕ್ಕಲಿಗರನ್ನು ಒಟ್ಟುಗೂಡಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಸಮುದಾಯದಿಂದ ಶಾಸಕರಾಗಿ, ಸಚಿವರಾಗಿ ಆಯ್ಕೆಯಾದವರೂ ಹಾಗೂ ಇತರ ಜನಪ್ರತಿನಿಧಿಗಳು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಲ್ಲಿಕಾರ್ಜುನ್, ಸುಜಾತಾಕೃಷ್ಣ, ನಾಗಣ್ಣ ಮಲ್ಲಪ್ಪ, ಸಿದ್ದರಾಜು, ಶ್ರೀಕಂಠಯ್ಯ ಇದ್ದರು.