ಮಂಡ್ಯ: ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ಭರಿಸಬೇಕೆಂಬ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ ಎಚ್ಚರಿಕೆ ನೀಡಿದರು.
ಬರಗಾಲ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದಾಗಿ ಕಷ್ಟಕ್ಕೆ ಸಿಲುಕಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯಸರ್ಕಾರ ಮಾಡುತ್ತಿದೆ. ಅದರಂತೆ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ರೈತರು ಸ್ವಂತ ಖರ್ಚಿನಲ್ಲಿಯೇ ಮಾಡಬೇಕೆಂದು ಆದೇಶವನ್ನು ಹೊರಡಿಸಿರುವುದು ಖಂಡನೀಯ. ಕೃಷಿ ಪಂಪ್‌ಸೆಟ್‌ಗೆಂದು ರೈತರು ಸ್ವಂತ ಖರ್ಚಿ ಮಾಡಬೇಕೆಂಬ ಆದೇಶವನ್ನು ರಾಜ್ಯಸರ್ಕಾರ ಹಿಂಪಡೆಯದಿದ್ದರೆ, ರಾಜ್ಯಾದ್ಯಂತ 35 ಲಕ್ಷ ಪಂಪ್‌ಸೆಟ್‌ಗಳ ರೈತ ಬಳಕೆದಾರರೊಂದಿಗೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ. ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ಬೆಳೆ ನಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ನಂತರ 200ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಇನ್ನು ಬೆಳೆದು ನಿಂತಿರುವ ಬೆಳೆ ಉಳಿಸಿಕೊಳ್ಳಲು ಪಂಪ್‌ಸೆಟ್ ಬಳಕೆ ಮಾಡಲು ವಿದ್ಯುತ್ ಅನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಾದರೆ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಆದ್ದರಿಂದ ಸಮರ್ಪಕ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಜತೆಗೆ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ರೈತಪರ ಯೋಜನೆಗಳನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಸಿ.ಎಂ.ಜವರೇಗೌಡ, ಉಪಾಧ್ಯಕ್ಷ ಕೃಷ್ಣ ಹೆಮ್ಮಿಗೆ, ಕಾರ್ಯದರ್ಶಿ ಜೆ.ಜೆ.ನಿಂಗರಾಜು ಇದ್ದರು.