ಜಿಲ್ಲೆ

ಮಡಿಕೇರಿಯಲ್ಲೂ ಬಿಜೆಪಿ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಅಪ್ಪಚ್ಚು ರಂಜನ್, ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ೧೨೦ ಕೋಟಿ ಹಿಂದುಗಳು ಶ್ರೀರಾಮ ಮತ್ತು ಆಂಜನೇಯನ ಭಕ್ತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಹನುಮ ಧ್ವಜವನ್ನ ಪೊಲೀಸರು ತೆರವು ಮಾಡಿರುವುದು ಖಂಡನೀಯ. ನಾವು ಭಾರತದಲ್ಲಿ ಇದ್ದೇವೋ ಅಥವಾ ದುಬೈನಲ್ಲಿ ಇದ್ದೇವೊ ಅನಿಸ್ತಾ ಇದೆ. ದುಬೈನಲ್ಲೂ ಹಿಂದು ದೇವಾಲಯ ನಿರ್ಮಾಣದ ಕೆಲಸ ಆಗುತ್ತಿದೆ. ಹನುಮ ಧ್ವಜಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಈ ಸರ್ಕಾರವನ್ನ ಕಿತ್ತೊಗೆಯುವ ಕೆಲಸ ಮಾಡಬೇಕು. ಅಯೋಧ್ಯೆಗೆ ಸಿದ್ದರಾಮಯ್ಯರಿಗೆ ಆಹ್ವಾನ ಇದ್ರೂ ಅವರು ಬರಲಿಲ್ಲ. ಹಿಂದುಗಳನ್ನ ತುಳಿಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದರು.

ರಾಷ್ಟ್ರಪತಿಗಳಿಗೆ ಸಿದ್ದರಾಮಯ್ಯ ಏಕವಚನ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಪ್ಪಚ್ಚು ರಂಜನ್, ಏಕವಚನ ಪದ ಬಳಕೆ ಮಾಡುವ ಮೂಲಕ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ರಾಷ್ಟ್ರಪತಿಗಳಿಗೆ ಏಕ ವಚನ ಪ್ರಯೋಗಿಸುತ್ತಾರೆ ಅಂದ್ರೆ ಇವರಿಗೆ ಎಷ್ಟು ದಿಮಾಕು ಇರಬೇಕು ಎನ್ನುವುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಮೇಲೆ ಕೂಡಲೇ ಕೇಸು ದಾಖಲಿಸಿಬೇಕು. ಜತೆಗೆ ಸಿದ್ದರಾಮಯ್ಯ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೆರೆಗೋಡುವಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡೇ ಧ್ವಜ ಹಾರಿಸಲಾಗಿತ್ತು. ಆದರೆ ಈ ಹಿಂದು ವಿರೋಧಿ ಸರ್ಕಾರ ಅಲ್ಪಸಂಖ್ಯಾತರನ್ನು ಮೆಚ್ಚಿಸಲು ಮತ್ತು ತುಷ್ಠೀಕರಣ ಮಾಡಲು ಅಧಿಕಾರದ ದುರ್ಬಳಕೆ ಮಾಡಿಕೊಂಡು ಹನುಮ ಧ್ವಜ ಇಳಿಸಿ ಸಮಯವಲ್ಲದ ಸಮಯದಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗಿದೆ. ಇದು ಹಿಂದು ವಿರೋಧಿ ಮತ್ತು ಸಂವೀಧಾನ ವಿರೋಧಿ ಕ್ರಮವಾಗಿದೆ. ಇದನ್ನು ಪಕ್ಷ ಖಂಡಿಸುತ್ತದೆ. ಇಂಥದೇ ಬೆಳವಣಿಗೆ ಇತ್ತೀಚೆಗೆ ಸಿಎಂ ಬರುವುದಕ್ಕೆ ಮೊದಲು ವಿರಾಜಪೇಟೆಯಲ್ಲೂ ನಡೆದಿತ್ತು. ಅಲ್ಲದೆ ಸಿಎಂ ಸಂಸ್ಕೃತಿ ಇಲ್ಲದವರಂತೆ ವರ್ತಿಸುತ್ತಿದ್ದು, ರಾಷ್ಟ್ರಪತಿ ಅವರಿಗೆ ಏಕವಚನ ಬಳಸಿದ್ದಾರೆ. ಇವರನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನು ಮಂಜುನಾಥ್ ಮತ್ತಿತರರು ಇದ್ದರು.