ಜಿಲ್ಲೆ

ಜನೌಷಧ ಸ್ಥಗಿತಕ್ಕೆ ಬಿಜೆಪಿ ಆಕ್ರೋಶ: ಮಿಮ್ಸ್ ಎದುರು ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಅಸ್ತಿತ್ವಕ್ಕೆ ತಂದ ಜನೌಷಧ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ.ಸದಾನಂದ್ ಅವರ ನೇತೃತ್ವದಲ್ಲಿ ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕರ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿರುವ ಜನೌಷಧ ಕೇಂದ್ರಗಳು ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಔಷಧ ಒದಗಿಸುತ್ತಿವೆ. ಕರ್ನಾಟಕದಲ್ಲಿಯೂ ನೂರಾರು ಜನೌಷಧ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಕುಂಟು ನೆಪ ಹೇಳಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಮುಚ್ಚಿಸುವ ಮೂಲಕ ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಜನೌಷಧ ಕೇಂದ್ರಗಳು ಉದ್ಯೋಗ ಸೃಷ್ಟಿಯಲ್ಲೂ ಮಹತ್ವದ ಪಾತ್ರ ವಹಿಸಿವೆ. ಜನೌಷಧ ಕೇಂದ್ರಗಳನ್ನು ನಡೆಸುವ ಮೂಲಕ ಅನೇಕರು ಸ್ವಯಂ ಉದ್ಯೋಗಿಗಳಾಗಿದ್ದು, ಇತರರಿಗೂ ಕೆಲಸ ನೀಡುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರವು ನೂರಾರು ಕುಟುಂಬಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ. ಇದು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯುಳ್ಳ ಪಿಎಂಬಿಜೆಪಿ ಯೋಜನೆಯಡಿ, ಜನೌಷಧ ಕೇಂದ್ರಗಳಲ್ಲಿ ಶೇ.70 ರಿಂದ 90 ರಷ್ಟು ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧ ದೊರಕುತ್ತಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಔಷಧ ಒದಗಿಸುತ್ತಿರುವ ಈ ಕೇಂದ್ರಗಳನ್ನು ಮುಚ್ಚುವ ಅಗತ್ಯವೇನಿದೆ?. ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿ ಮತ್ತು ಖಾಸಗಿ ಮೆಡಿಕಲ್ ಶಾಪ್‌ಗಳ ಲಾಬಿಗೆ ಮಣಿದು ಈ ನಿರ್ಧಾರ ತೆಗೆದುಕೊಂಡಿದೆಯೇ?. ಅಥವಾ ಪ್ರಧಾನಮಂತ್ರಿ ಮತ್ತು ಕೇಂದ್ರ ಸರ್ಕಾರಕ್ಕೆ ಸಿಗುತ್ತಿರುವ ಜನಮನ್ನಣೆ ಸಹಿಸಲಾಗದೆ ಜನರ ಆರೋಗ್ಯ ವಿಚಾರದಲ್ಲಿಯೂ ಕೊಳಕು ಮನಸ್ಥಿತಿಯ ರಾಜಕೀಯ ಮಾಡಲು ಹೊರಟಿದೆಯೇ? ಎಂದು ಪ್ರಶ್ನಿಸಿದರು.

ಜನೌಷಧ ಕೇಂದ್ರ ಬಡವರ ಪಾಲಿನ ವರದಾನ. ಆದರೆ ಬಡವರ ಆರೋಗ್ಯದಲ್ಲೂ ರಾಜಕೀಯ ಮಾಡುವ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್‌ಕ್ಕೆ ಜನರೇ ಬುದ್ದಿ ಕಲಿಸುವ ದಿನ ದೂರವಿಲ್ಲ. ರಾಜ್ಯ ಸರ್ಕಾರವು ಕಾಣದ ಕೈಗಳ ಹಿತಾಸಕ್ತಿಗಾಗಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಅನುಮಾನ ಮೂಡಿಸಿದೆ. ಜನೌಷಧ ಕೇಂದ್ರ ಮುಚ್ಚುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತೇವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈ ಆದೇಶ ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿ.ಟಿ.ಮಂಜುನಾಥ್, ವಸಂತ್‌ಕುಮಾರ್, ನರಸಿಂಹಚಾರಿ, ಹರ್ಷ, ಆನಂದ, ಶಿವು, ಸಿದ್ದರಾಜುಗೌಡ, ನಾಗಾನಂದ, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಅರವಿಂದ್, ಹನುಮಂತು, ಮಹಂತಪ್ಪ ಇತರರಿದ್ದರು.