ಜಿಲ್ಲೆ

ರಸ್ತೆ ಗುಂಡಿ ಮುಚ್ಚಲು ಆಗ್ರಹ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಮಂಡ್ಯ: ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದೆ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿಕಾಸ ಭವನದ ಎದುರು ಜಮಾಯಿಸಿದ ಕಾರ್ಯಕರ್ತರು, ನಂತರ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಅಂತೆಯೇ ಕೆಲ ಕಾಲ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾತ್ರವಲ್ಲದೆ ನಾಗರಿಕನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಯಮ ಧರ್ಮನ ವೇಷಧಾರಿ ಎಳೆದುಕೊಂಡು ಹೋಗುತ್ತಿರುವಂತೆ ಅಣಕು ಪ್ರದರ್ಶನ ನೀಡಲಾಯಿತು.

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಹಲವಾರು ಸಾವು ನೋವುಗಳು ಸಂಭವಿಸಿವೆ. ಆದರೆ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವ ಕಾರಣ ರಾಜ್ಯದಲ್ಲಿ ಯಾವುದೇ ರಸ್ತೆಯ ಅಭಿವೃದ್ಧಿಯೂ ನಡೆಯುತ್ತಿಲ್ಲ. ಕೊನೇ ಪಕ್ಷ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳನ್ನೂ ಸರಿಪಡಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಒಂದಲ್ಲ ಒಂದು ಕಡೆಯಲ್ಲಿ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ವಾಹನ ಸವಾರರು ಪ್ರತಿನಿತ್ಯ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಅಮಾಯಕ ಮಹಿಳೆಯರು, ಮಕ್ಕಳು ಸಾವಿಗೀಡಾಗುತ್ತಿರುವುದನ್ನು ನಿತ್ಯವೂ ನೋಡುತ್ತಿದ್ದೇವೆ. ಆದರೂ ರಾಜ್ಯ ಸರ್ಕಾರ ಮತ್ತು ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಖರ್ಚು ಮಾಡಿರುವ ಹಣವನ್ನೇ ಹಾಕಿದರೂ ಗುಂಡಿಗಳು ಸರಿಯಾಗುತ್ತಿದ್ದವು. ಆದರೆ ಗುಂಡಿಗಳು ಮಾತ್ರ ಸರಿಯಾಗುತ್ತಿಲ್ಲ. ಇದರಿಂದ ಹಣ ಪೋಲಾಗುತ್ತಿದೆಯೇ ಹೊರತು, ಯಾವುದೇ ರಸ್ತೆಗಳ ಸ್ಥಿತಿ ಬದಲಾವಣೆಯಾಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಗುಂಡಿಗಳ ಬಗ್ಗೆ ಕೇಳಿದರೆ ಹಿಂದಿನ ಸರ್ಕಾರ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿತ್ತೆಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಒಂದು ಕಡೆಯಿಂದ ಗುಂಡಿ ಮುಚ್ಚುತ್ತಿದ್ದರೆ, ಮತ್ತೊಂಡು ಕಡೆಗಳಲ್ಲಿ ಮುಚ್ಚಿರುವ ಕಳಪೆ ಗುಣಮಟ್ಟದ ಗುಂಡಿಗಳು ಬಾಯ್ದೆರೆದುಕೊಳ್ಳುತ್ತಿವೆ. ಆದರೂ ಈ ಸರ್ಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಆದ್ದರಿಂದ ಇನ್ನಾದರೂ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವ ಬದಲು ಈ ಕೂಡಲೇ ಬೆಂಗಳೂರಿನ ಎಲ್ಲ ಗುಂಡಿಗಳನ್ನ ಮುಚ್ಚಿ ಮರ್ಯಾದೆ ಉಳಿಸಿಕೊಳ್ಳಿ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ಜನರೇ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಉಪಾಧ್ಯಕ್ಷ ಶ್ರೀಧರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ಡಾ.ಸದಾನಂದ, ಕಾರ್ಯಕರ್ತರಾದ ವಸಂತ್, ಸಿ.ಟಿ.ಮಂಜುನಾಥ್, ಶಿವು ಹೊಸಹಳ್ಳಿ, ಸಿದ್ದರಾಜುಗೌಡ, ಚಂದ್ರ, ಪುಟ್ಟರ್‌ಮಲ್ ಜೈನ್, ಸುರೇಶ್, ಶಿವಲಿಂಗಯ್ಯ, ಮನು, ಗೊರವಾಲೆ ಶಿವಣ್ಣ, ಆನಂದ್ ಇತರರಿದ್ದರು.