ಜಿಲ್ಲೆ

ವಕ್ಫ್ ಮಂಡಳಿ ರದ್ಧತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬೆಳಗಾವಿ: ವಕ್ಫ್ ಮಂಡಳಿ ರದ್ದುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.

ನಗರದ ಸರ್ದಾರ ಮೈದಾನದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಮ್ಮ ಭೂಮಿ, ನಮ್ಮ ಹಕ್ಕು ಧರಣಿ ಸತ್ಯಾಗ್ರಹ ಕೈಗೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ ಮಾತನಾಡಿ, ಕರ್ನಾಟಕ ಸರ್ಕಾರ ಹಗರಣಗಳಲ್ಲಿ ಮುಳುಗಿ ಹೋಗಿದೆ. ಹಲವಾರು ಸರ್ಕಾರಿ ನೌಕರರ ಆತ್ಮಹತ್ಯೆಗೆ ಕಾರಣವಾದ ರಾಜ್ಯ ಸರ್ಕಾರ, ಈಗ ವಕ್ಫ್ ಮಂಡಳಿ ಮೂಲಕ ರೈತರ ಜಮೀನನ್ನು ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದರು. ಕೂಡಲೇ ರೈತರಿಗೆ ವಕ್ಫ್ ಮಂಡಳಿಯಿಂದ ನೀಡಿದ ನೋಟಿಸ್‌ಗಳನ್ನು ಹಿಂಪಡೆದು ಮುಂದೆ ಈ ರೀತಿಯ ಯಾವುದೇ ಕಾರ್ಯ ಮಾಡಬಾರದು. ಸಚಿವ ಜಮೀರ್ ಅಹ್ಮದ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ‘ವಕ್ಫ್ ಮಂಡಳಿ ಹಠಾವೋ ಅನ್ನದಾತ ಬಚಾವ್’ ಆಂದೋಲನವನ್ನು ಬಿಜೆಪಿ ಕೈಗೊಂಡಿದೆ. ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರುತ್ತದೆಯೋ ಆಗೆಲ್ಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಸಚಿವ ಜಮೀರ್ ಅಹ್ಮದ್ ವಕ್ಫ್ ಮಂಡಳಿ ಮೂಲಕ ರೈತರ ಜಮೀನು ಹಾಗೂ ಹಿಂದುಗಳ ಜಮೀನನ್ನು ಕಬಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ವಕ್ಫ್ ಮಂಡಳಿಯನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕರಾದ ಮಹಾಂತೇಶ ದೊಡಗೌಡ, ಅರವಿಂದ ಪಾಟೀಲ, ಅನಿಲ್ ಬೆನಕೆ, ಮುಖಂಡರಾದ ಸಂದೀಪ ದೇಶಪಾಂಡೆ, ಜಗದೀಶ ಮೆಟಗುಡ್ಡ, ಮುರುಗೇಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ರಾಜಶೇಖರ ಡೋಣಿ, ಗಿರೀಶ್ ಧೋಂಗಡಿ, ಯಲ್ಲೇಶ ಕೋಲಕಾರ, ನಿತೀನ್ ಚೌಗಲೆ, ಎಫ್.ಎಸ್. ಸಿದ್ದನಗೌಡರ ಸೇರಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡರು.