ಜಿಲ್ಲೆ

ಕಾಲ್ತುಳಿತಕ್ಕೆ ಕಾಂಗ್ರೆಸ್ ಕಾರಣವೆಂದ ಬಿಜೆಪಿ: ರಾಜ್ಯಸರ್ಕಾರ ವಿರುದ್ಧ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಿಂದ ನಡೆದ ಅಮಾಯಕರ ಸಾವಿಗೆ ಕಾರಣವಾದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನವೆಂದು ಆರೋಪಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರಿನಲ್ಲಿ ಕಾಲ್ತುಳಿತದಿಂದಾಗಿ ಅಮಾಯಕರ ಜೀವ ಹೋಗಿದೆ. ರಾಜ್ಯಸರ್ಕಾರದ ಮುನ್ನೆಚ್ಚರಿಕೆ ಇಲ್ಲದೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಈ ಘಟನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರೇ ಕಾರಣಕರ್ತರಾಗಿದ್ದಾರೆ. ಆದರೆ ಕಣ್ಣೊರೆಸುವ ತಂತ್ರವಾಗಿ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ವಿಜಯೋತ್ಸವ ಬೇಡ ಎಂದು ಆಯೋಜಕರ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಆದರೆ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಮುಂಚೂಣಿಯಲ್ಲಿ ನಿಂತು ವಿಜಯೋತ್ಸವ ಆಚರಿಸುವ ನೆಪವೊಡ್ಡಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ ಎದು ಕಿಡಿಕಾರಿದರು.

ಇಷ್ಟು ಸಾಲದೆಂಬಂತೆ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಆಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಅನುಮತಿ ಕೊಟ್ಟಿಲ್ಲ ಎಂದರೆ ಪ್ರವೇಶಕ್ಕೆ ಅವಕಾಶ ಕೊಟ್ಟವರು ಯಾರು?. 50 ವರ್ಷಕ್ಕಿಂತಲೂ ಹೆಚ್ಚಿನ ರಾಜಕೀಯ ಅನುಭವ ಇರುವ ಮುಖ್ಯಮಂತ್ರಿ ಇಂತಹ ಸುಳ್ಳು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ಆರ್‌ಸಿಬಿ ತಂಡಕ್ಕೆ ವಿಧಾನ ಸೌಧದ ಬಳಿಯೇ ಅಭಿನಂದಿಸುವುದಾಗಿ ಜನರನ್ನು ಬರಲು ಹೇಳಿದ್ದವರು ಯಾರು?. ಅಲ್ಲಿ ಮುಖ್ಯಮಂತ್ರಿ ಕುಟುಂಬದವರು, ಮಕ್ಕಳು, ಮೊಮ್ಮಕ್ಕಳು, ಮಂತ್ರಿಗಳ ಕುಟುಂಬದವರಿಗೆ ಮಾತ್ರ ಅವಕಾಶ ಕೊಟ್ಟವರು ಯಾರು?. ಅಲ್ಲಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಡೀ ಕ್ರಿಕೆಟ್ ತಂಡವನ್ನು ಕರೆದೊಯ್ಯಲು ಸಮರ್ಪಕವಾದ ಭದ್ರತಾ ವ್ಯವಸ್ಥೆ ಇಲ್ಲ ಎಂಬ ಕುಂಟು ನೆಪವೊಡ್ಡಿ ಅವರನ್ನು ಕರೆದೊಯ್ಯಬೇಕಾಯಿತಾ?. ಇವರೇನು ದೊಡ್ಡ ಬುಲ್ಡೋಜರಾ, ಇವರು ಹೋಗಿದ ತಕ್ಷಣ ಜನ ಬಿಟ್ಟು ಬಿಡುತ್ತಾರಾ?. ಪುಕ್ಕಟ್ಟೆ ಪ್ರಚಾರ ಗಿಟ್ಟಿಸಲು ಇಂತಹ ನಾಟಕ ಆಡುವುದನ್ನು ಇನ್ನಾದರೂ ಬಿಡಬೇಕು. ಇಲ್ಲದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಸರ್ಕಾರ ಮತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಬೇಜವಾಬ್ದಾರಿಯಿಂದಾಗಿ 11 ಜನರ ಪ್ರಾಣ ಹೋಗಿದೆ. ಇನ್ನು ಎಷ್ಟು ಜನ ಸತ್ತಿದ್ದಾರೆಂಬುದು ಲೆಕ್ಕ ಸಿಗುತ್ತಿಲ್ಲ. ಇವರು ಹೇಳುತ್ತಿರುವ ಮಾಹಿತಿ ಸುಳ್ಳು. ಕೆಲವರು ನಾಪತ್ತೆಯಾಗಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯ ಸುಮೋಟೋ ಕೇಸ್ ದಾಖಲಿಸಿಕೊಂಡ ನಂತರ ಇವರಿಗೆ ನಡುಕ ಉಂಟಾಗಿದೆ. ಆದ ಕಾರಣ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಘಟನೆಗೆ ನೇರ ಕಾರಣವಾಗಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ. ಈ ಸರ್ಕಾರದ ನಡೆ ಅಸಹ್ಯ ಹುಟ್ಟಿಸುತ್ತಿದೆ. ಆತ್ಮಸಾಕ್ಷಿ ಇದ್ದರೆ ಕುರ್ಚಿ ತ್ಯೇಜಿಸಿ ರಾಜೀನಾಮೆ ಕೊಡಿ, ಅದು ಬಿಟ್ಟು ಕಣ್ಣೀರು ಹಾಕುತ್ತಾರೆ. ವಿಜಯೋತ್ಸವಕ್ಕೆ ಎಷ್ಟು ಜನ ಬರುತ್ತಾರೆಂಬ ಮಾಹಿತಿ ಇಲ್ಲ ಎಂದರೆ ದುಷ್ಟ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದ ಅವರು, ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಬಿಟ್ಟಿ ಪ್ರಚಾರ ಮಾಡಬೇಕಿತಾ?. ಟೀಂ ಕ್ಯಾಪನ್ ಯಾರು ಎಂದೇ ಗೊತ್ತಿಲ್ಲ. ಇನ್ನು ಕ್ರಿಕೆಟ್ ಬಗ್ಗೆ ಇವರಿಗೆ ಏನು ಗೊತ್ತು?. ನಮಗೆ ಸಾವಿನ ಮೇಲೆ ರಾಜಕೀಯ ಮಾಡಬೇಡಿ ಎಂದು ಹೇಳುತ್ತಾರೆ. ಗ್ಯಾರೆಂಟಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಗಿರಾಕಿಗಳಿಗೆ ಜನರ ಭಾವನೆಗಳು ಹೇಗೆ ತಾನೆ ತಿಳಿಯುತ್ತವೆ ಎಂದು ಪ್ರಹಾರ ನಡೆಸಿದರು.

ಪೆಹಲ್ಗಾಮ್ ಘಟನೆ ಭಯೋತ್ಪಾದರು ನಡೆಸಿದ್ದು. ಕುಂಭಮೇಳದಲ್ಲಿ ಕೋಟ್ಯಂತರ ಜನರು ಬಂದಿದ್ದರು. ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾಡಿರುವುದಕ್ಕೂ ಬೆಂಗಳೂರು ಪ್ರಕರಣಕ್ಕೂ ತಾಳೆ ಮಾಡುವುದು ಸರಿಯಲ್ಲ. ಗಂಗಾ ನದಿಯಲ್ಲಿ ಮುಳುಗಿದರೆ ಒಳ್ಳೆಯದಾಗುತ್ತಾ ಎಂದು ಪ್ರಿಯಾಂಕ ಗಾಂಧಿ ಕೇಳುತ್ತಿದ್ದರು. ಇಂತಹವರಿಗೆ ನಮ್ಮ ಭಾವನೆಗಳು ಹೇಗೆ ಅರ್ಥವಾಗುತ್ತದೆ. ಮುಂಜಾಗ್ರತೆ ಇಲ್ಲದೆ ವಿಜಯೋತ್ಸವ ಮಾಡಿದ್ದು ಸರ್ಕಾರದ ಬೇಜವಾಬ್ದಾರಿತನ ಎದ್ದು ತೋರಿಸುತ್ತದೆ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಚಿಟ್‌ಪುಟ್ ಯುದ್ಧ ಎನ್ನುತ್ತಾರೆ. ಕೆ.ಆರ್.ಪೇಟೆಯಲ್ಲಿ ದಲಿತ ಯುವಕನ ಸಾವಾಗಿದ್ದಾರೂ ಅದಕ್ಕೆ ಸಂಬಧಿಸಿದಂತೆ ಸರಿಯಾದ ತನಿಖೆ ಮಾಡಿಲ್ಲ. ಮಂಗಳೂರಿನಲ್ಲಿ ಗಡೀಪಾರು ಮಾಡುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಅಶೋಕ್, ಡಾ.ಸದಾನಂದ, ಸಿ.ಟಿ.ಮಂಜುನಾಥ್, ವಿವೇಕ್, ಶಿವಕುಮಾರ್ ಆರಾಧ್ಯ, ಪ್ರಸನ್ನ, ನಾಗಾನಂದ್ ಇತರರಿದ್ದರು.