ವಿಜಯವಾಣಿ ಸುದ್ದಿಜಾಲ ಉಡುಪಿ
ಇತಿಹಾಸದಿಂದ ತಿಳಿದುಬರುವಂತೆ ಔರಂಗಜೇಬನು ದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತ ನಡೆಸಿದ ದೊರೆ. ಅದೇರೀತಿ ದೇಶದ ಯಾವುದಾದರೂ ರಾಜ್ಯದಲ್ಲಿ ಔರಂಗಜೇಬನಂತೆ ಆಡಳಿತ ನಡೆಸಿದ ಸಿಎಂ ಇದ್ದರೆ ಅದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಔರಂಗಜೇಬ್ ಹಾಗೂ ಸಿದ್ದರಾಮಯ್ಯ ನಡುವೆ ವ್ಯತ್ಯಾಸವೂ ಇಲ್ಲ ಎಂದು ಬೆಳ್ತಂಗಡಿ ಶಾಸಕ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಹರೀಶ ಪೂಂಜಾ ಟೀಕಿಸಿದರು.
ರಾಜ್ಯ ಬಜೆಟ್ನಲ್ಲಿ ಉಡುಪಿ ಜಿಲ್ಲೆ ಕಡೆಗಣನೆ ಹಾಗೂ ಮಲತಾಯಿ ಧೋರಣೆ ಖಂಡಿಸಿ ಬಿಜೆಪಿ ಉಡುಪಿ ನಗರ ಘಟಕದ ವತಿಯಿಂದ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಯಾರ್ಡ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ ಕುಂದಾಪುರ ಮಾತನಾಡಿ, ಜನನ-ಮರಣ ಪ್ರಮಾಣಪತ್ರ ಶುಲ್ಕ, ನೋಂದಣಿ ಶುಲ್ಕ ಹೆಚ್ಚಿಸಿದ್ದಾರೆ. ನೀರು, ಹಾಲು, ಪೆಟ್ರೋಲ್, ವಿದ್ಯುತ್, ಮೆಟ್ರೋ ಹಾಗೂ ಸಾರಿಗೆ ಪ್ರಯಾಣ ದರವನ್ನೂ ಹೆಚ್ಚಿಸಿ ಸಾಮಾನ್ಯ ಜನರ ಜೀವನಕ್ಕೆ ಬರೆ ಎಳೆದಿದ್ದಾರೆ. ಇದು ಜನರಿಗೆ ಹೊರೆಯಾದ ಸರ್ಕಾರವಾಗಿದೆ. ಬಹುಸಂಖ್ಯಾತರನ್ನು ಕಡೆಗಣಿಸಿ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಶೇ.4 ಮೀಸಲಾತಿ ನೀಡುವ ಮೂಲಕ ವಂಚಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎಲ್ಲ ಶಾಸಕರೂ ಬಿಜೆಪಿಯವರೇ ಇದ್ದಾರೆಂಬ ಕಾರಣಕ್ಕೆ ಬಜೆಟ್ನಲ್ಲಿ ಉಡುಪಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದು ಹಗರಣಗಳ ಸರ್ಕಾರ ಎಂದರು.
ಕಾರ್ಕಳ ಶಾಸಕ ವಿ.ಸುನೀಲಕುಮಾರ್ ಮಾತನಾಡಿ, ರಾಜ್ಯದಲ್ಲಿರುವುದು 60 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಹಗರಣ ಮಾಡಿರುವ, ಮುಸ್ಲಿಂ ತುಷ್ಟೀಕರಣದ ಹಾಗೂ ಹಿಂದುಗಳನ್ನು ಕಡೆಗಣಿಸುವ ಕೆಟ್ಟ ಸರ್ಕಾರ ಇದು ಎಂದು ಟೀಕಿಸಿದರು.
ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ವಿಪ ಸದಸ್ಯ ಕಿಶೋರಕುಮಾರ ಪುತ್ತೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ದಿನೇಶ ಅಮೀನ್, ಮಂಗಳೂರು ವಿಭಾಗ ಪ್ರಮುಖ ಉದಯಕುಮಾರ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾಕರ ಪೂಜಾರಿ, ದಿನಕರ ಬಾಬು, ದಿನಕರ ಶೆಟ್ಟಿ, ಶಿವಕುಮಾರ ಅಂಬಲಪಾಡಿ, ರೇಷ್ಮಾ ಶೆಟ್ಟಿ, ಸಂಧ್ಯಾ ರಮೇಶ, ವೀಣಾ ಶೆಟ್ಟಿ, ಪಕ್ಷದ ವಿವಿಧ ಟಕ ಹಾಗೂ ಮೋರ್ಚಾದ ಪದಾಧಿಕಾರಿಗಳು ಇದ್ದರು.
ನಗರಸಭಾ ಸದಸ್ಯ ಗಿರೀಶ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಕುಲಾಲ್ ವಂದಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಅತಿಹೆಚ್ಚು ತೆರಿಗೆ ತುಂಬವ ಜಿಲ್ಲೆಗಳಲ್ಲಿ 2ನೇ ಸ್ಥಾನದಲ್ಲಿದೆ. ಆದರೆ, ಇಲ್ಲಿನ ಜನರಿಗೆ ಯಾವುದೇ ಉಪಯೋಗಿ ಯೋಜನೆ ನೀಡಿಲ್ಲ. ಬಜೆಟ್ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲೆಗೆ ಮೆಡಿಕಲ್ ಹಾಗೂ ಕೃಷಿ ಕಾಲೇಜ್ ಮಂಜೂರಾತಿ, ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದ್ದೆವು. ಆದರೆ, ಜಿಲ್ಲೆಗೆ ಬಿಡಿಗಾಸು ನೀಡಿಲ್ಲ. ಜಿಲ್ಲೆಯ ಜನರು ಪ್ರಜ್ಞಾವಂತರಿದ್ದು, ನಮ್ಮ ತಾಳ್ಮೆ ಪರೀಸಬೇಡಿ. ಇಲ್ಲಿನ ಜನರು ಬೆಂಗಳೂರಿಗೆ ಬಂದು ಪ್ರತಿಭಟಿಸಲೂ ಸಿದ್ಧರಿದ್ದಾರೆ. ಬಜೆಟ್ನಲ್ಲಿ ಅನುದಾನ ನೀಡದ್ದರಿಂದ ಸಿದ್ದರಾಮಯ್ಯ ಉಡುಪಿ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದರು.
ಸಿದ್ದರಾಮಯ್ಯ ಅವರು ಉಡುಪಿ ಜಿಲ್ಲೆಗೆ ಬೇಡವಾದ ಕೆಲಸವನ್ನೇ ಮಾಡುತ್ತಿದ್ದಾರೆ. ಜಿಲ್ಲೆಗೆ ಹಕ್ಕಿನಿಂದ ಬರಬೇಕಿದ್ದ ಅನುದಾನ ಮೊಟಕು ಮಾಡಿದ್ದು, ಜನರಿಗೆ ತೊಂದರೆ ಕೊಡಬೇಕೆಂದು ಜನವಿರೋಧಿ ಮನೋಭಾವದ ಅಧಿಕಾರಿಗಳನ್ನು ನೇಮಿಸಿದ್ದಾರೆ. ಕಾಲವೂ ಸಹ ನಿಂತ ನೀರಿನಂತೆ ಅಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜಿಲ್ಲೆಗೆ ನ್ಯಾಯ ನೀಡುವ, ಜನವಿರೋಧಿ ಅಧಿಕಾರಿಗಳನ್ನು ನೀರಿಲ್ಲದ ಊರಿಗೆ ವರ್ಗಾಯಿಸಿ ತಕ್ಕ ಪಾಠ ಕಲಿಸುತ್ತೇವೆ. | ಪ್ರಮೋದ ಮಧ್ವರಾಜ್. ಮಾಜಿ ಸಚಿವ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷದಿಂದ ರಾಜ್ಯದ ಬಡ ಜನರಿಗೆ ಒಂದೇಒಂದು ಮನೆ ನೀಡಿಲ್ಲ. ಕೇಂದ್ರ ಸರ್ಕಾರ ನೀಡಿದ ಮನೆಯನ್ನೂ ಹಂಚಿಕೆ ಮಾಡಿಲ್ಲ. ಅಂತಹ ದುಸ್ಥಿತಿ ರಾಜ್ಯವನ್ನು ಕಾಡುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ರಕ್ಷಣೆ ಕೊಡುವ ಕೆಟ್ಟ ಪರಿಸ್ಥಿತಿ ಇದೆ. ಪೊಲೀಸ್ ಸ್ಟೇಷನ್ಗೆ ಬೆಂಕಿ ಹಾಕಿ, ಡಿವೈಎಸ್ಪಿಯ ತಲೆ ಒಡೆಯುವ ಭಯಾನಕ ವಾತಾವರಣ ಉಂಟಾಗಿದೆ. ಅವರದೇ ಸಚಿವ ರಾಜಣ್ಣ ತನ್ನನ್ನೂ ಸೇರಿಸಿ 28 ಜನರ ವಿರುದ್ಧ ಹನಿಟ್ರಾ$್ಯಪ್ ಆಗಿದೆ ಎನ್ನುತ್ತಾರೆ. ಅವರ ಮಗ ತನ್ನ ಕೊಲೆಗೆ ಸರ್ಕಾರವೇ ಸುಪಾರಿ ನೀಡಿದೆ ಎಂದು ದೂರು ದಾಖಲಿಸಿದ್ದಾರೆ. ಕಾನೂನು ಸುವ್ಯಸ್ಥೆ ಎಲ್ಲಿದೆ ಎಂದು ಗೃಹಮಂತ್ರಿ ಪರಮೇಶ್ವ ರಾಜ್ಯದ ಜನತೆಗೆ ತಿಳಿಸಬೇಕು. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ
ಪ್ರತಿಭಟನಾ ಸಭೆಗೂ ಮೊದಲು ಕಡಿಯಾಳಿಯಲ್ಲಿರುವ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಂದ ಕಲ್ಸಂಕ ಮಾರ್ಗವಾಗಿ ರಾಜಾಂಗಣದ ಪಾರ್ಕಿಂಗ್ ಯಾರ್ಡ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲೆಯ ಬಿಜೆಪಿ ಶಾಸಕರು, ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.