ಜಿಲ್ಲೆ

ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ

ರಾಮನಗರ : ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಮನಗರದ ಐಜೂರು ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಸಾರಿಗೆ ಬಸ್ಸುಗಳಿಗೆ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವಿಗೆ ಸಚಿವ ಪ್ರಿಯಾಂಕ ಖರ್ಗೆ ಅವರೇ ಹೊಣೆಗಾರರು ರಾಜೀನಾಮೆ ನೀಡಲಿ ಎಂಬ ಬರಹವುಳ್ಳ ಭಿತ್ತಿಪತ್ರಗಳನ್ನು ಅಂಟಿಸಿ ಆಕ್ರೋಶ ಹೊರಚೆಲ್ಲಿ ಸರ್ಕಲ್‌ನಲ್ಲಿ ಪ್ರತಿಭಟಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಹಿಂಬಾಲಕರಿಂದಲೇ ತನಗೆ ತೊಂದರೆಯಾಗಿದೆ ಎಂದು ಹೇಳಿ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ನಿಸ್ಪಕ್ಷಪಾತ ತನಿಖೆ ಆಗಬೇಕಿದ್ದರೆ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಬೇಕು. ಕೇಸನ್ನು ಸಿಬಿಐಗೆ ವಹಿಸಬೇಕು ಜೊತೆಗೆ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಮುಗ್ದ ಜನರ ದಿಕ್ಕು ತಪ್ಪಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 2023ರಿಂದ ರಾಜ್ಯದಲ್ಲಿ ರೈತರು, ಪ್ರಾಮಾಣಿಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಗುತ್ತಿಗೆದಾರ ಸಚಿನ್ ಸಚಿವ ಪ್ರಿಯಾಂಕ ಖರ್ಗೆ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿದೆ. ಇದು ನಾಚಿಕೆಗೇಡಿನ ಸಂಗತಿ.

ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ಹೇಗೆ ನಡೆಸಿಕೊಂಡಿತು ಎಂಬುದನ್ನು ನಾಡಿನ ಜನರು ನೋಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣವಿಲ್ಲ., ರೈತರನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಈಗ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಾಂಗ್ರೇಸ್ ಸರ್ಕಾರದ ಮೇಲೆ ಟೀಕೆಗಳನ್ನು ಸುರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಲತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರ ಕಾರ್ಯದರ್ಶಿ ಕಾಳಯ್ಯ, ತಾಲೂಕು ಕಾರ್ಯದರ್ಶಿ ಕಿಶನ್ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಗೌತಮ್ ಗೌಡ, ಎಸ್.ಆರ್ ನಾಗರಾಜು, ಎಲೆಕೇರಿ ರವೀಶ್, ರುದ್ರದೇವರು, ರಾಘವೇಂದ್ರ, ಶಿವಾನಂದ, ರಾಜು, ಚಂದ್ರಶೇಖರರೆಡ್ಡಿ, ನಾಗೇಶ್, ಗೂಗಾರೆದೊಡ್ಡಿ ನಾಗರಾಜು, ಜೈಶೀಲ, ಚೇತನ್, ಚನ್ನಪ್ಪ,   ಜೈಕುಮಾರ್, ಕೃಷ್ಣಪ್ಪ ಮುಂತಾದವರಿದ್ದರು.