ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಮಾತನಾಡಿದರು. 
ಜಿಲ್ಲೆ

ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಜೂ. ೧೮ಕ್ಕೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸ್ವಾರ್ಥ ಮತ್ತು ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಜೂ. ೧೮ರಂದು ಬೆಳಗ್ಗೆ ೧೦.೩೦ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಂಬಾ ನಿರೀಕ್ಷೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಅಧಿಕಾರಕ್ಕೆ ತಂದ ಮತದಾರರಿಗೆ ಬೆಲೆ ಏರಿಕೆಯಿಂದಾಗಿ ನಿರಾಶೆಯಾಗಿದೆ. ಆರ್ಥಿಕ ಪರಿಸ್ಥಿತಿ ಅವಲೋಕನ ಮಾಡದೆ ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡಿ ಅನುಷ್ಟಾನ ಮಾಡಿದ್ದಾರೆ. ಇದೇ ಕಾರಣದಿಂದಲೇ ದಿನೇ ದಿನೇ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಆಡಳಿತಕ್ಕೆ ಬಂದ ನಂತರ ಒಂದೆಡೆ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿ, ಇದನ್ನು ಸರಿದೂಗಿಸಲು ಬೆಲೆ ಏರಿಕೆ ಅಸ್ತçವನ್ನು ಬಳಸಲಾಗುತ್ತಿದೆ. ಇದರಿಂದ ಜನಜೀವನದ ಮೇಲೆ ಬರೆ ಎಳೆಯಲಾಗುತ್ತಿದೆ. ಬರಗಾಲದ ಪರಿಸ್ಥಿತಿಯಿಂದ ತತ್ತರಿಸಿದ್ದ ಜನತೆಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ದರ ಹೆಚ್ಚಳ ಮಾಡುವ ಮೂಲಕ ದಿನ ನಿತ್ಯದ ವಸ್ತುಗಳ ಬೆಲೆಯೂ ಹೆಚ್ಚಳಗೊಂಡಿದೆ. ಕೂಡಲೇ ರಾಜ್ಯಸರ್ಕಾರ ಈ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಚುನಾವಣೆಯಲ್ಲಿ ಘೋಷಿಸಿದ್ದ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಈ ನೀತಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಜನ ಮತ ನೀಡಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅತ್ಯಧಿಕ ಮತಗಳಿಂದ ಗೆಲ್ಲಲು ಸಹಕಾರಿಯಾಯಿತು. ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ, ಯಾವುದೇ ಅಭಿವೃದ್ಧಿಗೆ ಇಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಬಡ ಜನರ ಜೀವನದ ಬಗ್ಗೆ ಕಾಳಜಿ ವಹಿಸದೆ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರುಗಳು ಕೇವಲ ಕುರ್ಚಿಗಾಗಿ ಆಡಳಿತ ನಡೆಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ೧೮೭ ಕೋಟಿ ಹಣ ದುರುಪಯೋಗವಾಗಿದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಅರ್ಹತೆ ಇಲ್ಲ. ಕೂಡಲೇ ಸಿಎಂ ಪದತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವಕ್ತಾರರಾದ ಸೋಮಶೇಖರ್, ಎಚ್.ಎಸ್ ಪುಟ್ಟಸ್ವಾಮಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಉಪಸ್ಥಿತರಿದ್ದರು.