ಜಿಲ್ಲೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ನಗರದ ಗಾಂಧಿ ಚೌಕದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಬೃಹತ್ ಮಾನವ ಸರಪಳಿ ನಿರ್ಮಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸದರು.


ವಿವಿಧ ರೀತಿಯ ತೆರಿಗೆ, ಶುಲ್ಕಗಳ ದರ ಏರಿಸಿರುವ ಕಾಂಗ್ರೆಸ್ ಸರ್ಕಾರವು ಜನರ ಜೀವನವನ್ನು ದುಸ್ತರಗೊಳಿಸಿದೆ. ಇದೀಗ ತೈಲ ದರ ಹೆಚ್ಚಳ ಮಾಡಿದೆ. ಇದರಿಂದ ಬಸ್ ಪ್ರಯಾಣದ ದರ ಹೆಚ್ಚಿಸಲೂ ಮುಂದಾಗಿದೆ. ಇದು ಖಂಡನೀಯ ಎಂದು ಕಿಡಿಕಾರಿದರು.


ಜನರಿಗೆ ಹೊರೆ ಆಗುವ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.


ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಕುರಿತು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


ಲೋಕಸಭಾ ಚುನಾವಣಾ ನೀತಿ ಸಂಹಿತೆ ಅವಧಿಯಲ್ಲೇ ಈ ನಿಗಮದ 187 ಕೋಟಿ ರೂ. ಅನುದಾನವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಗರಣದ ರೂವಾರಿ ಯಾರು? ಅಧಿಕಾರಿಯ ಆತ್ಮಹತ್ಯೆಯ ಹೊಣೆ ಹೊರುವವರು ಯಾರು ಎಂದು ಪ್ರಶ್ನಿಸಿದರು.


ಶಾಸಕ ಟಿ.ಎಸ್.ಶ್ರೀವತ್ಸ, ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಕವೀಶ್‌ಗೌಡ, ಸಂದೇಶ್‌ಸ್ವಾಮಿ ಇತರರು ಇದ್ದರು.