ಮಂಡ್ಯ: ಮುಸ್ಲಿಂ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಾಗ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆಂದು ಆರೋಪಿಸಿ ಹಾಗೂ ಸದನದಿಂದ ಶಾಸಕರನ್ನು ಅಮಾನತು ಮಾಡಿರುವ ಕ್ರಮ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹಾಗೂ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ನೇತೃತ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಮತ್ತು ಕೂಡಲೇ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಮಾತ್ರವಲ್ಲದೆ ಮುಸ್ಲಿಂ ಸಮುದಾಯಕ್ಕೆ ಮೀಸಲು ನೀಡಲು ಸಂವಿಧಾನ ಬದಲಾಗಲಿದೆ, ಸಂವಿಧಾನ ಬದಲಾವಣೆ ಮಾಡುವವರಿದ್ದಾರೆ ಎಚ್ಚರ, ಕಾಂಗ್ರೆಸ್‌ನಿಂದ ಸಂವಿಧಾನದ ಕಗ್ಗೊಲೆ ನಡೆಯುತ್ತಿದೆ ಎಂದು ನಾಮಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು.
ಮುಸ್ಲಿಂ ಸಮುದಾಯದ ಓಲೈಕೆಗಾಗಿ ಧರ್ಮದ ಆಧಾರಿತವಾದ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಅವರಿಗೆ ಮೀಸಲು ನೀಡಲು ಸಂವಿಧಾನವನ್ನೇ ಬದಲಾಯಿಸುತ್ತೇವೆಂದು ಹೇಳಿರುವುದು ಘೋರ ಅಪರಾಧ. ಇಂತಹ ಹೇಳಿಕೆ ನೀಡಿರುವ ಡಿಕೆಶಿ ಅವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಇನ್ನೊಂದೆಡೆ ರಾಜ್ಯಸರ್ಕಾರದ ಆಡಳಿತ ಲೋಪವನ್ನು ಪ್ರಶ್ನೆ ಮಾಡಿದ್ದಕ್ಕೆ ವಿಪಕ್ಷದ ಶಾಸಕರನ್ನು ಸದನದಿಂದ ಅಮಾನತುಗೊಳಿಸುವಂತಹ ಹೀನ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಶಿವಕುಮಾರ್ ಆರಾಧ್ಯ, ವಿವೇಕ್ ಇತರರದ್ದರು.