ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತ್ತು. ಜತೆಗೆ ಎಲ್ಲರಿಗೂ ಯಾವುದೇ ನಿರ್ಬಂಧವಿಲ್ಲದೆ ಸೌಲಭ್ಯ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗೆ ಇನ್ನಿಲ್ಲದ ನಿಯಮ ರೂಪಿಸಿ ಸೌಲಭ್ಯದಿಂದ ಜನರು ವಂಚಿತರಾಗುವಂತೆ ಮಾಡುತ್ತಿದೆ. ಇದರೊಂದಿಗೆ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ವೈಫಲ್ಯ ಕಂಡಿದೆ ಎಂದು ಕಿಡಿಕಾರಿದರು.
ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಪ್ರತಿಪಕ್ಷದ 10 ಶಾಸಕರನ್ನು ಅಮಾನತು ಮಾಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಕಲಾಪವನ್ನು ಸುಗಮವಾಗಿ ಮುನ್ನಡೆಸಬೇಕಾದ ಸಭಾಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ಇದರೊಂದಿಗೆ ಪ್ರತಿಪಕ್ಷದ ಶಾಸಕರ ಹಕ್ಕನ್ನು ಹತ್ತಿಕ್ಕಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಕುಸಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 48 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದು ಧರ್ಮದವರ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ವಿದ್ಯುತ್ ಸೇರಿದಂತೆ ಜೀವನಾವಶ್ಯಕ ಬೆಲೆಗಳು ಹೆಚ್ಚಾಗಿದ್ದು, ಜನರು ಜೀವನ ಮಾಡುವುದೇ ದುಸ್ತರವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಬಜೆಟ್ ಅಲ್ಪಸಂಖ್ಯಾತರ ಪರವಾಗಿದೆ. ಮಾತ್ರವಲ್ಲದೆ, ಹಿಂದುಗಳ ವಿರೋಧಿಯಾಗಿದೆ. ರೈತರು, ನೀರಾವರಿ ಮತ್ತು ಶಿಕ್ಷಣ ವಿರೋಧಿ ಬಜೆಟ್ ಮಂಡಿಸಲಾಗಿದೆ. ಇನ್ನು ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಅರವಿಂದ್, ಪಣಕನಹಳ್ಳಿ ಸುರೇಶ್, ವಿವೇಕ್, ಸಿ.ಟಿ.ಮಂಜುನಾಥ್, ನಿತ್ಯಾನಂದ, ನಾಗಾನಂದ, ಕೆರಗೋಡು ಮಹೇಶ್ ಇತರರಿದ್ದರು.