ಮಂಡ್ಯ: ಅಧಿಕಾರಕ್ಕೆ ಬರುವ ಮುನ್ನ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತೇವೆಂದು ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಎಂದು ಆರೋಪಿಸಿ ಹಾಗೂ ವಿದ್ಯುತ್ ದರ ಏರಿಕೆ ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಅಂತೆಯೇ ವಿದ್ಯುತ್ ಉಚಿತವೆಂದು ಹೇಳಿ ಜನರನ್ನು ವಂಚಿಸಲಾಗಿದೆ ಎಂದು ಕಿವಿಯ ಮೇಲೆ ಚೆಂಡು ಹೂವುಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಬರುವ ಮುನ್ನ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ನೀಡುವುದಾಗಿ ಘೋಷಿಸಿದರು. ಆದರೀಗ ಅಧಿಕಾರಕ್ಕೆ ಬಂದು ಸಚಿವ ಸಂಪುಟ ರಚನೆಯಾದ ಬಳಿಕ 12 ತಿಂಗಳು ಸರಾಸರಿ ಲೆಕ್ಕವೆಂದು ಹೇಳುತ್ತಿದ್ದಾರೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತೊಂದರೆಗೆ ಸಿಲುಕುವಂತಾಗಿದೆ. ಏಕೆಂದರೆ 70 ರಿಂದ 80 ಯುನಿಟ್ ವಿದ್ಯುತ್ ಉಪಯೋಗಿಸಲು ನಿಯಮ ಹಾಕಿದ್ದಾರೆ. ಹೆಚ್ಚು ಯೂನಿಟ್ ಉಪಯೋಗಿಸಿದರೆ ವಿದ್ಯುತ್ ಬಿಲ್ ಪಾವತಿಸಬೇಕೆಂದು ಎಚ್ಚರಿದ್ದಾರೆ. ಹಾಗಾದರೆ ಉಚಿತವೆಂಬುದು ಬೋಗಸ್ ಗ್ಯಾರಂಟಿ ನೀಡಿದ್ದು ಏಕೆಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿದ್ಯುತ್ ಉಚಿತವೆಂಬ ಸುಳ್ಳು ಘೋಷಣೆ ಮಾಡಿದೆ. ಮತ್ತೊಂದು ಕಡೆ ನಿಯಮ ವಿಧಿಸಿದೆ. ಇದು ಜನರಿಗೆ ಮಾಡಿದ ಮೋಸವಲ್ಲವೇ?. ಆದ್ದರಿಂದ 200 ಯುನಿಟ್ ವಿದ್ಯುತ್ ಉಚಿತ ನೀಡುವುದು ಸರ್ಕಾರ ನಿರ್ಧಾರವಾಗಬೇಕು. ಈ ಮೂಲಕ ಜನರಿಗೆ ಹೆಚ್ಚೆಚ್ಚು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಮಾತಿಗೆ ತಪ್ಪಿದ ಸರ್ಕಾರವೆಂದು ಜನರೇ ನಿರ್ಧರಿಸುತ್ತಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ದೇಶದಲ್ಲಿ ಗೋವುಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತಿದೆ. ಹಲವು ಸಮಾರಂಭಗಳು ಗೋವು ಪೂಜೆಯ ನಂತರ ಆರಂಭವಾಗುತ್ತದೆ. ಗೋಶಾಲೆಗಳನ್ನು ನಡೆಸುವುದು ಪವಿತ್ರ ಕಾರ್ಯ. ಮಾತ್ರವಲ್ಲದೆ ಹಾಲು ನೀಡುವುದಷ್ಟೇ ಅಲ್ಲದೆ ಕೃಷಿ ಭೂಮಿಯನ್ನು ಫಲವತ್ತಾಗಿಸುತ್ತದೆ. ಕೋಟ್ಯಂತರ ರೈತರು ಗೋವುಗಳನ್ನು ಅವಲಂಬಿಸಿದ್ದಾರೆ. ಗೋ ಆಧಾರಿತ ಹೈನುಗಾರಿಕೆಯು ಕೋಟ್ಯಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ಹೀಗಿರುವಾಗ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಗೋವುಗಳನ್ನು ಎಮ್ಮೆ ಮತ್ತು ಕೋಣಗಳಿಗೆ ಹೋಲಿಕೆ ಮಾಡಿರುವುದ ಖಂಡನೀಯ. ವಯಸ್ಸಾದ ಹಸುಗಳನ್ನು ಏನು ಮಾಡಬೇಕೆಂದು ಸಚಿವರು ಕೇಳಿದ್ದಾರೆ. ವಯಸ್ಸಾದ ತಂದೆ, ತಾಯಿಯನ್ನು ನಮ್ಮ ಸಂಸ್ಕೃತಿಯಲ್ಲಿ ಹೇಗೆ ರಕ್ಷಣೆ ಮಾಡುತ್ತೇವೆಯೋ ಅದರಂತೆ ಹಸುಗಳನ್ನು ರಕ್ಷಿಸಬೇಕು. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧದ ಕಾನೂನನ್ನು ರದ್ದುಪಡಿಸಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಡಾ.ಎನ್.ಎಸ್.ಇಂದ್ರೇಶ್, ಎಚ್.ಆರ್.ಅರವಿಂದ್, ಶ್ರೀಧರ್, ಸಿ.ಟಿ.ಮಂಜುನಾಥ್, ವಿವೇಕ್, ನವನೀತ್‌ಗೌಡ, ಶಿವಕುಮಾರ್ ಆರಾಧ್ಯ, ಹರ್ಷ ಇತರರಿದ್ದರು.