ಜಿಲ್ಲೆ

ಸಿದ್ದರಾಮಯ್ಯ, ಇಬ್ರಾಹಿಂ ವಿರುದ್ಧ ಆಕ್ರೋಶ: ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

reportermys

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರುದ್ಧ ಗುರುವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ಅಪ್ರತಿಕೃತಿಗಳಿಗೆ ಚಪ್ಪಲಿಹಾರ ಹಾಕಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರ ಘಟಕದ ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಸ್ವಾರ್ಥಕ್ಕಾಗಿ ನಾಗರಿಕತೆಯನ್ನೇ ಮರೆತಂತಿರುವ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಎಂದು ಕರೆದಿದ್ದಾರೆ. ನಮಗೆ ನಾಯಿ ಪದದ ಬಗ್ಗೆ ಗೌರವ ಇದೆ. ಅತ್ಯಂತ ಪ್ರಾಮಾಣಿಕ, ನಂಬಿಕಸ್ಥ ಜೀವಿಯಾಗಿ ಬದುಕುವ ಜೀವಿ ಎಂದು ಟೀಕಿಸಿದರು.

ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲೋಕಾಯುಕ್ತವನ್ನು ನಿಷ್ಕ್ರಿಯೆಗೊಳಿಸಿ, ಎಸಿಬಿಯನ್ನು ರಚಿಸಿದ್ದರು. ಅವರ ಆಡಳಿತದಲ್ಲಿ ಎಷ್ಟು ಜನ ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ. ಆದ್ದರಿಂದ ತಕ್ಷಣ ಸಿದ್ದರಾಮಯ್ಯ ಅವರು ಬೇಷರತ್ ಕ್ಷಮೆಯಾಚಿಸಬೇಕು. ಇನ್ನು ಯೋಗಿ ಆದಿತ್ಯನಾಥ್ ಬಗ್ಗೆ ಸಿ.ಎಂ.ಇಬ್ರಾಹಿಂ ಲಘುವಾಗಿ ಮಾತನಾಡುತ್ತಾರೆ. ಜೆಡಿಎಸ್‌ನವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ತಕ್ಷಣ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ನಾಗರಿಕ ಸಮಾಜ ಭಾರತದ ಪ್ರಜಾಪ್ರಭುತ್ವ ಒಳಗೆ ನಂಬಿಕೆ ಇಟ್ಟುಕೊಂಡಿದೆ. ನಮ್ಮೆಲ್ಲ ಭಾಷೆ ಮತ್ತು ಆಚರಣೆಗಳು ಕೂಡ ಪಾರ್ಲಿಮೆಂಟರಿ ಡೆಮಾಕ್ರಸಿ ಒಳಗೆ ನಡೆಯುತ್ತಿವೆ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದು ಒಂದು ಕರ್ತವ್ಯವೂ ಆಗಿದೆ. ಆದರೆ ಇದನ್ನು ಮರೆತ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮುಖಂಡ ಅಶೋಕ್ ಜಯರಾಂ, ಮುನಿರಾಜು, ಚಂದಗಾಲು ಶಿವಣ್ಣ, ರಮೇಶ, ಸಿದ್ದರಾಜು, ವಿವೇಕ್, ಹನುಮಂತು, ನಾಗಾನಂದ, ಮಹಂತಪ್ಪ, ಶಿವಕುಮಾರ್ ಇತರರಿದ್ದರು.