ಜಿಲ್ಲೆ

ಪಾಕಿಸ್ತಾನದ ಸಚಿವ ಭುಟ್ಟೋ ವಿರುದ್ಧ ಪ್ರತಿಭಟನೆ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಆಕ್ರೋಶ

ಶ್ರೀರಂಗಪಟ್ಟಣ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆ ಮಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಶ್ರೀರಂಗಪಟ್ಟಣ ಮಂಡಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿಗಳು ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಹಾಗೂ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಪಾಕಿಸ್ತಾನಿ ಸಚಿವನ ಭಾವಚಿತ್ರ ಹರಿದು ಬೆಂಕಿಯಲ್ಲಿ ಸುಟ್ಟು ಆಕ್ರೋಶ ಹೊರಹಾಕಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ ಹಾಗೂ ಯುವ ಮುಖಂಡ ಸಚ್ಚಿದಾನಂದ ಮಾತನಾಡಿ, ವಿಶ್ವದ ಮೇರುವ್ಯಕ್ತಿತ್ವದ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತ್ಯಂತ ತುಚ್ಛ ಪದಗಳಿಂದ ನಿಂದಿಸಿ ಟೀಕಿಸಿರುವ ಪಾಕ್ ವಿದೇಶಾಂಗ ಸಚಿವ ಕೇವಲ ನಮ್ಮ ಪ್ರಧಾನಿಗೆ ಮಾತ್ರವಲ್ಲ ಸಂಪೂರ್ಣ ಭಾರತೀಯರಿಗೆ ಮಾಡಿರುವ ಘೋರ ಅಪಮಾನ. ಆತನ ವಿರುದ್ಧ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿದರು. ನಾಮನಿರ್ದೇಶಿತ ಪುರಸಭಾ ಸದಸ್ಯ ಪುಟ್ಟರಾಮು, ಯುವ ಮುಖಂಡ ದರ್ಶನ್ ಲಿಂಗರಾಜು, ಪುಟ್ಟಮಾದು, ಬಿ.ಸಿ.ಕೃಷ್ಣೇಗೌಡ, ಮಂಜುನಾಥ್, ಪ್ರಭಾಕರ್ ಸೇರಿದಂತೆ ಹಲವರು ಇದ್ದರು.