ಜಿಲ್ಲೆ

ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಒತ್ತಾಯ: ನಗರದಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ

reportermys

ಮಂಡ್ಯ: ಹಿಂದು ಎನ್ನುವ ಪದ ಅಶ್ಲೀಲ ಎನ್ನುವಂತ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್ ಎಂವಿ ಪ್ರತಿಮೆ ಬಳಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಸತೀಶ್ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಸ್ವಾಮಿಗೌಡ ಮನವಿ ಸ್ವೀಕರಿಸಿದರು.
ಸಿ.ಪಿ.ಉಮೇಶ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಸಾರ್ವತ್ರಿಕವಾಗಿ ಹಿಂದು ಎನ್ನುವ ಪದ ಅಶ್ಲೀಲ. ಆ ಪದದ ಅರ್ಥ ಕೇಳಿದರೆ ನಾಚಿಕೆಯಾಗುತ್ತದೆ ಎಂದು ಹೇಳುವ ಮೂಲಕ ಈ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. ಈ ರೀತಿಯ ಮಾನಸಿಕತೆಯನ್ನು ಕಾಂಗ್ರೆಸ್ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದು, ಹಿಂದುಗಳನ್ನು ಅವಮಾನಿಸುವುದು ಹಾಗೂ ಕಡೆಗಣಿಸುವುದು ಸೇರಿದಂತೆ ಇನ್ನಿತರ ಕಾರ್ಯಸೂಚಿಗಳನ್ನು ತಮ್ಮ ವೃತ್ತಿಯಾಗಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ‘ಹಿಂದು’ ಎಂಬುದು ಭಾರತದ ಜೀವನ ಪದ್ಧತಿ ಎಂದು ತೀರ್ಪು ನೀಡಿದೆ. ನಮ್ಮ ರಾಷ್ಟ್ರಗೀತೆಯ ಕಡೇ ಸಾಲಿನಲ್ಲಿ ಜೈ ಹಿಂದ್ ಎನ್ನುವ ಶಬ್ದವೂ ಇದೆ. ಹೀಗಾಗಿ ಈ ದೇಶದಲ್ಲಿ ವಾಸವಿರುವ ಬಹುಸಂಖ್ಯಾತ ಹಿಂದುಗಳಿಗೆ ಮಾನಸಿಕವಾಗಿ ನೋವುಂಟು ಮಾಡುವಂತಹ ಹೇಳಿಕೆಯನ್ನು ನೀಡುವ ಮೂಲಕ ರಾಷ್ಟ್ರಗೀತೆಗೆ ಹಾಗೂ ರಾಷ್ಟ್ರದ ಬಹುಸಂಖ್ಯಾತರಿಗೆ ಅಪಮಾನ ಮಾಡಿರುತ್ತಾರೆ. ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮವನ್ನು ನಾಶ ಮಾಡುವಂತಹ ವ್ಯವಸ್ಥಿತ ಹುನ್ನಾರ ನಡೆಯುತ್ತಿದ್ದು, ಇದರ ಟೂಲ್‌ಕಿಟ್ ಅಂಗವಾಗಿ ಸತೀಶ್ ಜಾರಕಿಹೊಳಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹಿಂದುಗಳು, ಹಿಂದುತ್ವವನ್ನು ಅಪಮಾನಿಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರದ ಹಿತದೃಷ್ಟಿಯಿಂದ ಸಮಾಜದಲ್ಲಿ ಶಾಂತಿ ನೆಲೆಸುವ ದೃಷ್ಟಿಯಿಂದ ಇಂತಹ ಹೇಳಿಕೆ ಕೊಟ್ಟ ಸತೀಶ್ ಜಾರಕಿಹೊಳಿ ಸೇರಿದಂತೆ ಇತರರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ನಗರಾಧ್ಯಕ್ಷ ವಿವೇಕ್, ಮುಖಂಡರಾದ ಚಂದಗಾಲು ಶಿವಣ್ಣ, ಎಚ್.ಆರ್.ಅರವಿಂದ್, ವಸಂತ್‌ಕುಮಾರ್, ಹೊಸಹಳ್ಳಿ ನಾಗೇಶ, ಸಿದ್ದರಾಜುಗೌಡ, ಮಹೇಶ್, ಪ್ರಸನ್ನಕುಮಾರ್, ಚಂದ್ರು, ಶಿವಕುಮಾರ್, ನಾಗಾನಂದ ಇತರರಿದ್ದರು.