ಜಿಲ್ಲೆ

ಶಿರಸಿಯಲ್ಲಿ ಬಿಜೆಪಿ ಪ್ರತಿಭಟನೆ

Uttara Kannada - Subash Hegde

ಶಿರಸಿ: ರಾಜ್ಯ ಸರ್ಕಾರಕ್ಕೆ ಅಲ್ಪ ಸಂಖ್ಯಾತರಿಗೆ ಹಣ ಮೀಸಲಿಡಲು ಮಾತ್ರ ಯಾವುದೇ ಅನುದಾನ ಕೊರತೆ ಉಂಟಾಗುವುದಿಲ್ಲ. ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶಿರಸಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
 ಇಲ್ಲಿಯ ಅಂಚೆ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.  ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, "ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನೂ  ಬಿಟ್ಟಿಭಾಗ್ಯದಂತಹ ಯೋಜನೆಗೆ ಬಳಸುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ದಲಿತರು, ಬಡವರ ಅಭಿವೃದ್ಧಿಗಿಂತ ವೋಟ್ ಬ್ಯಾಂಕಿಂಗ್ ರಾಜಕಾರಣೇ ಪ್ರಮುಖವಾಗಿದೆ ಎಂದರು.
ಮುರಾರ್ಜಿ ಶಾಲೆಯ ನಿರ್ವಹಣೆ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನೂ ಬೇರೆ ಕಡೆ ವರ್ಗಾಯಿಸಲಾಗಿದೆ. ರೈತ ನಿಧಿ ಯೋಜನೆಯನ್ನೂ ಸಹ ಬಳಕೆ ಮಾಡದೇ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷನಂದನ ಬೋರ್ಕರ್, ಶ್ರೀಕಾಂತ ಬಳ್ಳಾರಿ, ಉಷಾ ಹೆಗಡೆ, ವೀಣಾ ಶೆಟ್ಟಿ, ಗಣಪತಿ ನಾಯ್ಕ ಇತರರಿದ್ದರು.