ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರಿಗೆ ಶುಕ್ರವಾರ ಪ್ರತಿಭಟಿಸಲಾಯಿತು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಮಾತನಾಡುವಾಗ ಅವರ ಹೇಳಿಕೆಯ ಭಾಷಣದ ತುಣುಕನ್ನು ತಪ್ಪಾಗಿ ಅರ್ಥ ಬರುವ ಹಾಗೆ ತಿರುಚಿದ್ದಾರೆ. ಬಿ. ಆರ್. ಅಂಬೇಡ್ಕರವರು 1952 ರಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪಧಿರ್ಸಿದಾಗ ಅವರ ವಿರುದ್ಧ ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಾಟಿರ್ಗೆ ಅಪಾರ ಗೌರವವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರು ಅಂಬೇಡ್ಕರ್ ರವರ 5 ಪ್ರಮುಖ ಕ್ಷೇತ್ರಗಳಾದ ಜನ್ಮಭೂಮಿ, ಶಿಕ್ಷಾಭೂಮಿ, ದಿಕ್ಷಾಭೂಮಿ, ಮಹಾಪರಿ ನಿರ್ವಾಣಭೂಮಿ, ಚೈತ್ಯಭೂಮಿ ಎಂದು ಅಭಿವೃದ್ಧಿ ಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹೆಸರನ್ನು ಕೇವಲ ಮತಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದೆ. ಅವರ ಸಾವಿನಲ್ಲೂ ಸಹ ಅವರ ಅಂತ್ಯಕ್ರಿಯೆಗೆ ಸ್ಥಳವನ್ನು ನೀಡದ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ನಡೆಯಬೇಕಾದ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯಗಳನ್ನು ಮರೆ ಮಾಚಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಸರ್ಕಾರದ ಸಚಿವರು ಕುಮ್ಮಕ್ಕು ನೀಡಿ ಜನರ ಅಭಿವೃದ್ಧಿ ವಿಚಾರಗಳನ್ನು ದಿಕ್ಕು ತಪ್ಪಿಸಲು ಹೊರಟಿದೆ. ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವಂತ ರೀತಿ ನಿಜಕ್ಕೂ ಶೋಚನೀಯ ಎಂದು ಮಾತನಾಡಿದರು.
ಅನೀಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಉಮೇಶ ಚನ್ನುಪಾಟೀಲ, ಪ್ರಕಾಶ ಕೊತಂಬರಿ, ನವೀನ ಕೊಟೆಕಲ್, ಶಿವು ಗೊಟೂರ, ಸುರೇಶ ಚವ್ಹಾಣ, ನವೀನ ಕುರ್ತಕೋಟಿ, ಪ್ರವಿಣ ಹಡಪದ, ವಿನಾಯಕ ಹರಕೇರಿ, ಸಚಿನ್ ಮಡಿವಾಳರ, ಗೋಪಾಲ ಗಡ್ಡದವರ, ಮಾಂತೇಶ ಬಾತಾಖಾನಿ, ಅರುಣ ಹುಲ್ಲೂರ, ರವಿ ಮಾನ್ವಿ, ಯೋಗೇಶ್ವರಿ ಭಾವಿಕಟ್ಟಿ, ಸಂತೋಷ ಮುಳ್ಳಾಳ, ರಾಹುಲ ಸಂಕಣ್ಣವರ ಇತರರು ಇದ್ದರು.