ಬೆಲೆ ಏರಿಕೆ ಖಂಡಿಸಿ ಲಕ್ಷ್ಮೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಡಾ.ಚಂದ್ರು ಲಮಾಣಿ, ಸುನೀಲ ಮಹಾಂತಶೆಟ್ಟರ, ನವೀನ ಬೆಳ್ಳಟ್ಟಿ ಇತರರು ಇದ್ದರು. 
ಜಿಲ್ಲೆ

ಗ್ಯಾರಂಟಿಗಾಗಿ ಅಭಿವೃದ್ಧಿ ಕಾರ್ಯಕ್ಕೆ ತಿಲಾಂಜಲಿ

ಸೋಮನಾಥ ರೆಡ್ಡಿ

ಲಕ್ಷ್ಮೇಶ್ವರ: ಪೆಟ್ರೋಲ್ ಮತ್ತು ಡೀಸೆಲ್ ಸೇರಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಅಲ್ಲದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರಿಶಿಷ್ಟರಿಗೆ ಮೀಸಲಾಗಿರುವ ಸಾವಿರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಪೊಳ್ಳು ಗ್ಯಾರಂಟಿಗಳನ್ನು ಈಡೇರಿಸಲು ಸರ್ಕಾರ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.

ಹಾಲು, ವಿದ್ಯುತ್, ಸ್ಟಾೃಂಪ್ ಡ್ಯೂಟಿ, ವಾಹನ ನೋಂದಣಿ ಸೇರಿದಂತೆ ರೈತರು ಉಪಯೋಗಿಸುವ ಬಿತ್ತನೆ ಬೀಜ, ಪಹಣಿ ಪತ್ರ, ಆಸ್ತಿಗಳ ನೋಂದಣಿ ಶುಲ್ಕ, ಇಂಜಿನಿಯರಿಂಗ್ ಶುಲ್ಕ, ವಾಹನಗಳ ಮೇಲೆ ತೆರಿಗೆ ಸೇರಿದಂತೆ ಹತ್ತಾರು ಬೆಲೆ ಏರಿಕೆ ಜೊತೆಗೆ ಪೆಟ್ರೋಲ್ ಡೀಸೇಲ್ ದರವನ್ನೂ ಏರಿಕೆ ಮಾಡಿರುವುದು ಖಂಡನೀಯ. ಸಚಿವರಿಗೆ ಅನುದಾನ ದೊರೆಯುತ್ತಿಲ್ಲ, ಯಾವುದೇ ಸಚಿವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಮಾಡಿದರೆ ‘ಹಣ ಇಲ್ಲ’ ಎನ್ನುವ ಸಿದ್ಧ ಉತ್ತರ ಸಿಗುತ್ತದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ಇಟ್ಟಿದೆ. ಯಾವ ನಿಗಮಗಳಿಗೂ ಅನುದಾನವಿಲ್ಲ, ನಿಗಮಗಳಿಗೆ ನೀಡಬೇಕಾದ ಹಣವನ್ನು ಸಹ ಸರ್ಕಾರ ಬಳಕೆ ಮಾಡಿಕೊಂಡಿರಬೇಕು ಎಂದರು.

ಜಿಲ್ಲಾ ರೈತ ಮೋರ್ಚಾ ಮುಖಂಡ ಡಿ.ವೈ. ಹುನಗುಂದ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ಎಂ.ಆರ್. ಪಾಟೀಲ, ಅಶೋಕ ಪಲ್ಲೇದ ಮಾತನಾಡಿ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಉಚಿತ ಭಾಗ್ಯಗಳನ್ನು ನೀಡಿ ಮತ್ತೊಂದು ಕೈಯಿಂದ ಎರಡು ಪಟ್ಟು ಹಣ ತೆರಿಗೆ ಮೂಲಕ ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು.

ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಶಿವಯೋಗಿ ಅಂಕಲಕೋಟಿ, ಮಂಜುನಾಥ ಗೊರವರ, ನಿಂಗಪ್ಪ ಬನ್ನಿ, ನೀಲಪ್ಪ ಹತ್ತಿ, ಬಸವರಾಜ ಚಕ್ರಸಾಲಿ, ಗಿರೀಶ ಚೌರಡ್ಡಿ, ಮುತ್ತಣ್ಣ ಚೋಟಗಲ್, ಬಾಬಣ್ಣ ವೇರ್ಣೆಕರ, ಪ್ರಕಾಶ ಮಾದನೂರ, ಶಕ್ತಿ ಕತ್ತಿ, ಸಂತೋಷ ಜಾವೂರ, ತುಕ್ಕಪ್ಪ ಪೂಜಾರ, ಚನ್ನಪ್ಪ ಕರೆಯತ್ತಿನ, ಈರಣ್ಣ ಪೂಜಾರ, ಜಗದೀಶಗೌಡ ಪಾಟೀಲ, ನಾಗರಾಜ ಹುನಗುಂದ ಇತರರಿದ್ದರು. ಗ್ರೇಡ್2 ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಬಂದೋಬಸ್ತ್ ಒದಗಿಸಿದ್ದರು.