ಜಿಲ್ಲೆ

ಸಾವರ್ಕರ್​ ಫೋಟೋ ವಿರುದ್ಧ ಎಸ್​ಡಿಪಿಐ ಆಕ್ರೋಶ; ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು

Webdesk - Ravikanth

ಶಿವಮೊಗ್ಗ: ವಿನಾಯಕ ದಾಮೋದರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಎಸ್​ಡಿಪಿಐ ಕಾರ್ಯಕರ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರಂಭದ ಪ್ರಯುಕ್ತ ಶಿವಮೊಗ್ಗ ಸಿಟಿ ಸೆಂಟರ್ ಮಾಲ್​ವೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಆತನ ಫೋಟೋ ತೆಗೆಯಿರಿ ಎಂದು ಪಟ್ಟು ಹಿಡಿದಿದ್ದರು.

ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರು ಪ್ರತಿಭಟನೆ ನಡೆಸಿ, ಎಸ್​ಡಿಪಿಐ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದಲೇ ಸಿಟಿ ಸೆಂಟರ್ ಮಾಲ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಅದಾಗ್ಯೂ ಸಾವರ್ಕರ್ ಫೋಟೋ ವಿರುದ್ಧ ತಕರಾರು ತೆಗೆದ ಎಸ್​​ಡಿಪಿಐ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಮಾತ್ರವಲ್ಲ, ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.