ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಮಂಜುನಾಥ ಅಂಗಡಿ

ಧಾರವಾಡ: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿ ಕಾನೂನನ್ನು ರದ್ದು ಮಾಡಿ ರೈತರ ಆದಾಯಕ್ಕೆ ಕುತ್ತು ತಂದಿದೆ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಿದ್ದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ರೈತ ವಿದ್ಯಾನಿಧಿ ಯೋಜನೆಯನ್ನು ರದ್ದು ಮಾಡಿ ಬಡ ರೈತರ ಮಕ್ಕಳಿಗೆ ಅನ್ಯಾಯ ಮಾಡಿದೆ. ಉದ್ದೇಶಿತ ಗೋಶಾಲೆ ಯೋಜನೆ ಹಿಂಪಡೆಯಲು ನಿರ್ಧರಿಸಿರುವುದು ಅಕ್ರಮವಾಗಿ ಗೋವು ಸಾಕಾಣಿಕೆದಾರರಿಗೆ ಲಾಭ ಮಾಡಿಕೊಡಲು ಮುಂದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡುವ ನಿರ್ಣಯವನ್ನು ರದ್ದುಪಡಿಸಲಾಗಿದೆ. ವಾರ್ಷಿಕ 2 ಕಂತುಗಳಲ್ಲಿ 4,000 ರೂ. ನೀಡುತ್ತಿದ್ದ ಪಿಎಂ ಕಿಸಾನ್ ಯೋಜನೆಯನ್ನು ರದ್ದುಪಡಿಸಲಾಗಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದತಿ, ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
* ಪೊಲೀಸರೊಂದಿಗೆ ಚಕಮಕಿ: ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಮಾತಿನ ಚಕಮಕಿಯಾಯಿತು. ಆದರೂ ಹಿಂದೆ ಸರಿಯದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.