ಕಾಂಗ್ರೆಸ್ ಭ್ರಷ್ಟಾಚಾರ ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರ್ ಪಾಟೀಲ್ ಹಲಗೇರಿ, ಸುನಿಲ್ ಹೆಸರೂರು, ಮಹಾಲಕ್ಷ್ಮೀ ಕಂದಾರಿ ಇದ್ದರು. 
ಜಿಲ್ಲೆ

ಎಟಿಎಂ ಸರ್ಕಾರ ವಿಸರ್ಜಿಸಿ

Kopala - Raveendra V K

ಕೊಪ್ಪಳ:ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಪಂಚರಾಜ್ಯ ಚುನಾವಣೆಗೆ ಹಣ ಹೊಂದಿಸಲು ಎಟಿಎಂನಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಮಿಷನ್ ದಂಧೆ ಹೆಚ್ಚಿದ್ದು, ಗುತ್ತಿಗೆದಾರರು, ಜನರು ಹೈರಾಣಾಗಿದ್ದಾರೆ. ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಸಚಿವ, ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ.

ಆದರೆ, ಪಂಚರಾಜ್ಯ ಚುನಾವಣೆಗೆ ಕೋಟ್ಯಂತರ ರೂ. ಹಣ ಕಳಿಸಲಾಗುತ್ತಿದೆ. ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬರೋಬ್ಬರಿ 42 ಕೋಟಿ ರೂ. ನಗದು ಸಿಕ್ಕಿದ್ದು, ಕಾಂಗ್ರೆಸ್ ಭ್ರಷ್ಟಚಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಬರ ತಾಂಡವಾಡುತ್ತಿದ್ದು, ಪರಿಹಾರ ನೀಡುತ್ತಿಲ್ಲ. ವಿದ್ಯುತ್ ದರ ಏರಿಸಿ, ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರೈತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆಂದು ಆರೋಪಿಸಿದರು.

ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಸರ್ಕಾರ ವಿಸರ್ಜಿಸಬೇಕು. ಬರದಿಂದ ತತ್ತರಿಸಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು.

ಸಮರ್ಪಕ ವಿದ್ಯುತ್ ಪೂರೈಸಬೇಕು. ಕಮಿಷನ್, ವರ್ಗಾವಣೆ ದಂಧೆಗೆ ಬ್ರೇಕ್ ಹಾಕಬೇಕು. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಭ್ರಷ್ಟಾಚಾರ ವಿರುದ್ಧ ಸೂಕ್ತ ತನಿಖೆಗೆ ಮುಂದಾಗಬೇಕು. ರಾಜ್ಯದ ಜನರು ಬರುವ ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರ್ ಪಾಟೀಲ್ ಹಲಗೇರಿ, ಸುನಿಲ್ ಹೆಸರೂರು, ಮಹಾಲಕ್ಷ್ಮೀ ಕಂದಾರಿ ಇತರರಿದ್ದರು.