ಚಾಮರಾಜನಗರ: ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯ 11 ಸಾವಿರ ಕೋಟಿ ಅನುದಾನ ಬಳಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಶ್ರೀ ಭುವನೇಶ್ವರಿ ವೃತ್ತದ ಬಳಿ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, 2023-24ನೇ ಸಾಲಿನಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯದ ಒಟ್ಟು ಆಯವ್ಯಯದಲ್ಲಿ ಶೇ.24.10 ಅಂದರೆ 34.293 ಕೋಟಿ ರೂ. ಅನುದಾನವನ್ನು ನಿಗದಿಪಡಿಸಿದೆ. ಆದರೆ ಈ ಅನುದಾನದಲ್ಲಿ ಸುಮಾರು 11.000 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ದಲಿತರ ಅಭಿವೃದ್ಧಿಗೆ ಇದು ಮಾರಕವಾಗಲಿದೆ. 2013 ರಲ್ಲಿ ಜಾರಿಗೆ ತಂದಿರುವ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ ಸೆಕ್ಷನ್ 7ಡಿಯು ಎಸ್ಸಿ,ಎಸ್ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದರಂತೆ ಗ್ಯಾರೆಂಟಿ ಯೋಜನೆಗಳಿಗೆ 11.000 ಕೋಟಿ ರೂ. ಅನುದಾನವನ್ನು ಬಳಕೆ ಮಾಡುತ್ತಿರುವುದು ಈ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಯಾವುದೇ ಕಾರಣಕ್ಕೂ ಎಸ್ಸಿ/ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಇತರೆ ಯೋಜನೆಗಳಿಗೆ ಬಳಸಿಕೊಳ್ಳಬಾರದು. ಒಂದು ವೇಳೆ ಅನುದಾನವನ್ನು ಬಳಕೆ ಮಾಡಿದ್ದೆ ಆದರೆ, ಕಾಂಗ್ರೆಸ್ ದಲಿತ ವಿರೋಧಿ ಧೋರಣೆಗೆ ಇದಕ್ಕಿಂತಲೂ ಉದಾಹರಣೆ ಬೇಕೆ ಎಂದು ಕಿಡಿಕಾರಿದರು.
ಮುಖಂಡ ಕೆ.ಶಿವರಾಮ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ದಲಿತರಿಗೆ ಮೀಸಲು ಇಟ್ಟಿರುವ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡುವುದರ ಮೂಲಕ ದಲಿತ ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದಾರೆ. ರಾಜ್ಯದ ಜನರು ಗ್ಯಾರೆಂಟಿ ಯೋಜನೆಗಳಿಗಾಗಿ ಮತ ನೀಡಿದ್ದಾರೆ ವಿನಃ, ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡಿಲ್ಲ. ಅವರಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವೇ ಇರಲಿಲ್ಲ. ಒಂದು ಕಡೆ ದಲಿತರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎನ್ನುತ್ತಾ ದಲಿತರ ಅನುದಾನವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಉಚಿತ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುತ್ತಲೇ ದಿನ ಬಳಕೆ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮಾಜಿ ಕಾಡಾ ಅಧ್ಯಕ್ಷ ನಿಜಗುಣರಾಜು, ನೂರೊಂದು ಶೆಟ್ಟಿ, ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಕೂಡು ಪ್ರಕಾಶ್, ಮುಖಂಡ ವೆಂಕಟರಮಣಸ್ವಾಮಿ(ಪಾಪು), ನಾಗಶ್ರೀ ಪ್ರತಾಪ್, ಪಿ.ವೃಷಭೇಂದ್ರಪ್ಪ, ಆರ್.ಸುಂದರ್ ಹಾಗೂ ಇತರರು ಭಾಗವಹಿಸಿದ್ದರು.