ಬಂಟ್ವಾಳ: ಕಾಂಗ್ರೆಸ್ ಹಿಂದಿನಿಂದಲೂ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿಕೊಂಡು ಅಧಿಕಾರ ಗಿಟ್ಟಿಸಿಕೊಳ್ಳುತ್ತಿರುವ ವಿಚಾರ ಬಂಟ್ವಾಳದ ಜನತೆಗೆ ತಿಳಿದಿದೆ. ಇದಕ್ಕೆ ರಮಾನಾಥ ರೈ ಮಾತುಗಳೇ ಸಾಕ್ಷಿಯಾಗಿದ್ದು, ಯಾರ ಡಿಎನ್‌ಎ ಯಾರೊಂದಿಗೆ ಲಿಂಕ್ ಆಗಿದೆ ಎಂದು ಸ್ಪಷ್ಟವಾಗಿ ಅವರೇ ತಿಳಿಸಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಮಂಡಲ ಕೋಶಾಧಿಕಾರಿ ದಿನೇಶ್ ಭಂಡಾರಿ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಟ್ವಾಳದ ಅಮಾಯಕ ಹಿಂದು ಕಾರ್ಯಕರ್ತ ಶರತ್ ಮಡಿವಾಳ, ಪುತ್ತೂರಿನ ಪ್ರವೀಣ್ ನೆಟ್ಟಾರು ಹತ್ಯೆ ಸಹಿತ ಸಾಲು-ಸಾಲು ಹಿಂದು ಕಾರ್ಯಕರ್ತರ ಕೊಲೆ ಪ್ರಕರಣ, ಕಾರ್ಕಳದ ಹಿಂದು ಯುವತಿಯ ಮೇಲೆ ಅತ್ಯಾಚಾರ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿಷೇಧಿತ ಪಿ.ಎಫ್.ಐನ ರಾಜಕೀಯ ಅಂಗಸಂಸ್ಥೆಯಾದ ಎಸ್‌ಡಿಪಿಐ ಜತೆ ಅಧಿಕಾರಕ್ಕಾಗಿ ಕಾಂಗ್ರೆಸ್ ಕೈ ಜೋಡಿಸಿರುವುದು ಸರಿಯೇ? ಎಂದು ಪ್ರಶ್ನಿಸಿದರು.
ಎಸ್‌ಡಿಪಿಐನ ಮೈತ್ರಿಯನ್ನು ಸಮರ್ಥಿಸುವ ಸಲುವಾಗಿ ರಮಾನಾಥ ರೈ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ. 2010ರಲ್ಲಿ ನಾನು ಪುರಸಭೆಯ ಅಧ್ಯಕ್ಷನಾಗಿದ್ದದ್ದು ಕಾಂಗ್ರೆಸ್‌ನ ಇಬ್ಬರು ಸದಸ್ಯರಿಂದ ಹೊರತು ಮುಸ್ಲಿಂ ಲೀಗ್‌ನ ಬೆಂಬಲದಿಂದ ಅಲ್ಲ. ಆ ಸಂದರ್ಭ ಮುಸ್ಲಿಂ ಲೀಗ್‌ನಿಂದ ಮತ್ತು ಕಾಂಗ್ರೆಸ್ ಪಕ್ಷದಿಂದಲೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುರಸಭಾ ಸದಸ್ಯರಾದ ವಸಂತಿ ಗಂಗಾಧರ್ ಹಾಗೂ ಸ್ವರ್ಣಲತಾ ಮಲ್ಲಿ ನನ್ನನ್ನು ಬೆಂಬಲಿಸಿದ್ದರು. ಈ ಚುನಾವಣೆಯಲ್ಲಿ ಸ್ವತಃ ರಮಾನಾಥ ರೈ ಮತದಾನದಲ್ಲಿ ಭಾಗವಹಿಸಿದ್ದು, ಇದು ಅವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಗೋವಿಂದ ಪ್ರಭು, ಜನಾರ್ದನ ಬೊಂಡಾಲ, ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಭಾಕರ ಪ್ರಭು, ಹರಿಪ್ರಸಾದ್, ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಪ್ರಣಮ್ ಉಪಸ್ಥಿತರಿದ್ದರು.