ಮಂಡ್ಯ: ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದಂತಹ 45 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.
ಪ್ರಗತಿಪರ, ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿ ಬಜೆಟ್ ಇದಾಗಿದೆ. ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕುವ ಎಲ್ಲ ಅಂಶಗಳು ಕೇಂದ್ರ ಬಜೆಟ್‌ನಲ್ಲಿವೆ. ಇದರಲ್ಲಿ ಪ್ರಧಾನಿ ಮೋದಿ ಅವರ ದೂರದೃಷ್ಟಿತ್ವ ಕಾಣುತ್ತಿದೆ. ಭಾರತವನ್ನು ವೇಗವಾಗಿ ಪ್ರಗತಿಪಥದಲ್ಲಿ ಕೊಂಡೊಯ್ಯುವ ಅಂಶಗಳು ಬಜೆಟ್‌ನಲ್ಲಿವೆ. ಕರ್ನಾಟಕಕ್ಕೂ ಸಾಕಷ್ಟು ಅನುದಾನ ಹಂಚಿಕೆಯಾಗಿದೆ. ಬಜೆಟ್‌ನ ಅತ್ಯುತ್ತಮ ಅಂಶಗಳಿಂದ ಪ್ರತಿಪಕ್ಷಗಳು ನಿರಾಸೆಗೊಂಡಿವೆ. ಇದರಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಭದ್ರ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಬಂದಿರುವುದು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಎಸ್.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬೇಡಿಕೆಯಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಯೋಜನೆಗೆ ಚಾಲನೆ ಸಿಕ್ಕಿತ್ತು. ಈಗ ಅನುದಾನವೂ ಸಿಕ್ಕಿದೆ ಎಂದು ತಿಳಿಸಿದರು.
ರಾಜ್ಯದ ರೈಲ್ವೆ ಕ್ಷೇತ್ರಕ್ಕೂ 7,561 ಕೋಟಿ ರೂ. ಅನುದಾನ ಬರಲಿದೆ. ಇದು ಹಳಿಗಳ ಡಬ್ಲಿಂಗ್, ವಿದ್ಯುದ್ದೀಕರಣ, ಹೊಸ ಯೋಜನೆ ಅನುಷ್ಠಾನ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಿದೆ. ರೈಲ್ವೆಯಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಹೆಚ್ಚಾಗಲಿದೆ. ಬಜೆಟ್ ಮೂಲಕ ಬಹುತೇಕ ಯೋಜನೆಗಳಲ್ಲೂ ಕರ್ನಾಟಕದ ಪಾಲು ಬಂದೇ ಬರುತ್ತದೆ. ಕೃಷಿ, ಕೈಗಾರಿಕೆ, ಸಣ್ಣ ಮತ್ತು ಕಿರು ಉದ್ಯಮ, ಗ್ರಾಮೀಣಾಭಿವೃದ್ಧಿ, ಜಲಜೀವನ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ನಗರ ಮೂಲಸೌಕರ್ಯ ಸೇರಿದಂತೆ ಹತ್ತಾರು ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ವಿವರಿಸಿದರು.
ಮಧ್ಯಮ ವರ್ಗದ ಜನರ ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳದಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ. ಇದು ಆರ್ಥಿಕತೆಗೆ ಅನುಕೂಲಕವಾಗಿದೆ. ಜನರ ಕೈಯಲ್ಲಿ ಹೆಚ್ಚು ಹಣವಿದ್ದಾಗ ಕೊಳ್ಳುವ ಶಕ್ತಿಯೂ ಹೆಚ್ಚಾಗಲಿದೆ. ಇದು ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿದೆ. ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಕೌಶಲಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾನೂನು ತಿದ್ದುಪಡಿಗಳ ಮೂಲಕ ಸುಧಾರಿತ ಬ್ಯಾಂಕ್ ಆಡಳಿತ ಮತ್ತು ಹೂಡಿಕೆಗದಾರರ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಜಿಪಂ ಮಾಜಿ ಸದಸ್ಯ ಎನ್.ಶಿವಣ್ಣ ಚಂದಗಾಲು, ಬಿಜೆಪಿ ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ನಾಗಾನಂದ್ ಹಾಜರಿದ್ದರು.